ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಬಿಜೆಪಿ ಹಿಡಿತದಲ್ಲಿ, ಖಂಡಿತ ನಮಗೆ ಬೆಂಬಲ ಕೊಡುತ್ತಾರೆ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಅನೈತಿಕ ಸರ್ಕಾರ ರಚನೆಗೆ ಸುಪ್ರೀಂ ಕೋರ್ಟ್ ಕಪಾಳಮೋಕ್ಷ ನೀಡಿದೆ ಎಂದು...
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:  ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಅವರ ಆಜ್ಞೆಯಂತೆ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸಲು  ಅಸಂವಿಧಾನಿಕವಾಗಿ 15 ದಿನ ಅವಕಾಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲರ ಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಮತ್ತು ಜೆಡಿಎಸ್ ನಿಂದ ಶಾಸಕರನ್ನು ಸೆಳೆದುಕೊಂಡು ಬಿಜೆಪಿ ಕುದುರೆ ವ್ಯಾಪಾರ ನಡೆಸಿರುವ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಅಮಿತ್ ಶಾ, ಯಡಿಯೂರಪ್ಪ, ಜನಾರ್ದನರೆಡ್ಡಿ, ಶ್ರೀರಾಮುಲು ಯಾರ್ಯಾರ ಜೊತೆ ಏನು ಮಾತಾಡಿದ್ದಾರೆ ಎಂಬ ಮಾಹಿತಿ ನನ್ನ ಬಳಿ ಇದೆ. ಸೂಕ್ತ ಕಾಲದಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಅಮಿತ್‌ ಶಾ ಎಲ್ಲ ರಾಜ್ಯಗಳಲ್ಲೂ ಇದೇ ಥರ ಮಾಡಿದ್ದಾರೆ. ಅವರು ಗೋಬೆಲ್ಸ್ ಥಿಯರಿಯನ್ನು ಅರ್ಥಮಾಡಿಕೊಂಡು ಕೆಲಸ ಮಾಡ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ. ನಡೆಸೋಕೆ ಬಿಡುವುದೂ ಇಲ್ಲ ಎಂದರು.

ಶಾಸಕ ಆನಂದ್‌ಸಿಂಗ್ ಕಿಡ್ನ್ಯಾಪ್ ಮಾಡಿ ಬಿಜೆಪಿ ಅಕ್ರಮ ಬಂಧನದಲ್ಲಿಟ್ಟಿದೆ. ಆದರೆ ಅವರು ನಮ್ಮ ಸಂಪರ್ಕದಲ್ಲಿದ್ದಾರೆ. ಶಾಸಕ ಪ್ರತಾಪ್‌ಗೌಡ ಪಾಟೀಲ್ 16ನೇ ತಾರೀಖಿನಂದು ಬೆಂಗಳೂರಿಗೆ ಬಂದು ನಮ್ಮ ಪರವಾಗಿ ಸಹಿ ಹಾಕಿದ್ದಾರೆ. ಎಂದು ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕದಲ್ಲಿ ಅನೈತಿಕ ಸರ್ಕಾರ ರಚನೆಗೆ ಸುಪ್ರೀಂ ಕೋರ್ಟ್ ಕಪಾಳಮೋಕ್ಷ ನೀಡಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಸಂವಿಧಾನದಲ್ಲಿ ರಾಜ್ಯಪಾಲರ ಪಾತ್ರ ಅತ್ಯಂತ ಪ್ರಮುಖವಾಗಿದ್ದು ಅವರು ಪಕ್ಷಪಾತರಹಿತವಾಗಿ ವರ್ತಿಸಬೇಕು. ಆದರೆ ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅವರು ಸರ್ಕಾರ ರಚನೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ತಕ್ಕ ತೀರ್ಪು ಸುಪ್ರೀಂ ಕೋರ್ಟ್ ನಿಂದ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂವಿಧಾನಬದ್ಧವಾಗಿ ಪ್ರಜಾಪ್ರಭುತ್ವಕ್ಕೆ ಸರಿಯಾಗಿ ನಡೆದುಕೊಳ್ಳುವ ಬದಲು ಅಮಿತ್ ಶಾ ಮತ್ತು ನರೇಂದ್ರ ಮೋದಿ ಹೇಳಿದ ಮಾತುಗಳನ್ನು ಅನುಸರಿಸುತ್ತಾರೆ. ರಾಜ್ಯಪಾಲರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಸದನದಲ್ಲಿ ಬಹುಮತ ಸಾಬೀತುಪಡಿಸಲು ಯಡಿಯೂರಪ್ಪನವರು 7 ದಿನಗಳ ಕಾಲಾವಕಾಶವನ್ನು ಕೇಳಿದರೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಬಿಜೆಪಿ ಜೊತೆಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದರು.

ಬಿಜೆಪಿಗೆ 104 ಶಾಸಕರ ಬೆಂಬಲವಿದೆ, ಆದರೆ ನಮ್ಮ ಬಳಿ 117 ಶಾಸಕರಿದ್ದಾರೆ, ಆದರೂ ಕೂಡ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿ ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರು ಕುಮ್ಮಕ್ಕು ನೀಡುತ್ತಿದ್ದಾರೆ. ವಿರೋಧ ಪಕ್ಷಗಳ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ಮಾಡಿರುವ ಪ್ರಯತ್ನಗಳ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಅದನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಗುಲಾಂ ನಬಿ ಆಜಾದ್, ನಾವು ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದೆವು. ಆದರೆ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದರು. ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶವನ್ನು ರಾಜ್ಯಪಾಲರು ನೀಡಿರುವುದು ಭಾರತದ ಇತಿಹಾಸದಲ್ಲಿಯೇ ಇಲ್ಲ, ಬಿಜೆಪಿಯಿಂದ ನೇಮಕಗೊಂಡ ಹಲವು ರಾಜ್ಯಗಳ ರಾಜ್ಯಪಾಲರು ಸಂವಿಧಾನಬದ್ಧವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ವತಿಯಿಂದ ಪ್ರಜಾಪ್ರಭುತ್ವ ಉಳಿಸಿ ರಾಜಭವಲ ಚಲೋ ಜಾಥಾವನ್ನು ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಹಮ್ಮಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com