ಶ್ರೀರಾಮುಲು ಅಂತಹವರಿಂದ ನನ್ನ ನಿದ್ದೆಗೆಡಿಸಲು ಸಾಧ್ಯವಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಶ್ರೀರಾಮುಲು ಅಂತವರಿಂದ ನನ್ನ ನಿದ್ದೆಗೆಡಿಸಲು ಸಾಧ್ಯವಿಲ್ಲ, ಕಾಂಗ್ರೆಸ್-ಜೆಡಿಎಸ್ ...
ಹಾಸನ ಜಿಲ್ಲೆಯ ಹೊಳೆನರಸೀಪುರ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ ಕುಟುಂಬ
ಹಾಸನ ಜಿಲ್ಲೆಯ ಹೊಳೆನರಸೀಪುರ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ ಕುಟುಂಬ

ಹೊಳೆನರಸೀಪುರ (ಹಾಸನ): ಶ್ರೀರಾಮುಲು ಅಂತವರಿಂದ ನನ್ನ ನಿದ್ದೆಗೆಡಿಸಲು ಸಾಧ್ಯವಿಲ್ಲ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ಭೇಟಿ ನೀಡಿ 5 ವರ್ಷ ಸ್ಥಿರ ಮತ್ತು ದೃಢ ಸರ್ಕಾರ ರಚಿಸಲು ಸಂಕಲ್ಪ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ಮೈತ್ರಿ ಸರ್ಕಾರವನ್ನು ಕಿತ್ತೊಗೆದು ತಾವು ಅಧಿಕಾರಕ್ಕೆ ಬರಬಹುದು ಎಂಬ ಕನಸು ಕಾಣುತ್ತಿದ್ದರೆ ಅದು ನನಸಾಗಲು ಸಾಧ್ಯವಿಲ್ಲ, ಐದು ವರ್ಷ ನಾವು ಸುಭದ್ರ ಆಡಳಿತ ನೀಡಲಿದ್ದೇವೆ ಎಂದರು.

ಈ ಬಾರಿ ಸಿಎಂ ಹುದ್ದೆ ನಿಭಾಯಿಸುವುದು ಸವಾಲಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರ ಅಭಿಪ್ರಾಯ, ಸಲಹೆಗಳನ್ನು ಸೂಕ್ಷ್ಮವಾಗಿ ತೆಗೆದುಕೊಂಡು ನೂತನ ಸಚಿವ ಸಂಪುಟ ರಚಿಸಲಾಗುವುದು. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ರಚಿಸಲಾಗಿದೆ. ನಮ್ಮ ನಡುವೆ ಯಾವುದೇ ಕಿತ್ತಾಟ ಮತ್ತು ಭಿನ್ನಾಭಿಪ್ರಾಯಗಳಿಲ್ಲ. ಅದೆಲ್ಲ ಸುಳ್ಳು ವದಂತಿಯಷ್ಟೆ. ನಮ್ಮ ನಮ್ಮ ಅನುಭವಗಳ ಆಧಾರದ ಮೇಲೆ ಚರ್ಚೆ ನಡೆಸಿ ಖಾತೆ ಹಂಚಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ತಮ್ಮ ತಂದೆಯ ಹುಟ್ಟೂರಾದ ಹಾಸನ ಜಿಲ್ಲೆಯ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ಇಂದು ಮಧ್ಯಾಹ್ನ ಕುಮಾರಸ್ವಾಮಿ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ. ಸರ್ಕಾರ ರಚನೆಗೆ ನನಗೆ ಬೆಂಬಲ ನೀಡಿದ ಕಾಂಗ್ರೆಸ್ ವರಿಷ್ಠರು ಮತ್ತು ಚುನಾವಣೆಯಲ್ಲಿ ಬೆಂಬಲ ನೀಡಿದ ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಶಾಸಕ ಶ್ರೀರಾಮುಲು, ಬಿಜೆಪಿಯನ್ನು ಅಧಿಕಾರದಿಂದ ದೂರವುಳಿಸುವ ಪ್ರಯತ್ನದಿಂದ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಮುಖಂಡರನ್ನು ನೆಮ್ಮದಿಯಿಂದ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು.

ಹೆಚ್ ಡಿ ಕುಮಾರಸ್ವಾಮಿಯವರು ನಾಡಿದ್ದು 23ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com