
ತುಮಕೂರು: ಜೆಡಿ (ಎಸ್) -ಕಾಂಗ್ರೆಸ್ ಮೈತ್ರಿ ಸರ್ಕಾರದ ದೀರ್ಘಾಯುಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ನಾಯಕರ ಸಹಕಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ ನಂತರ ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಅವರು ಶಿವಕುಮಾರ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಅನಿವಾರ್ಯವಾಗಿ ನಾನು ಮುಖ್ಯಮಂತ್ರಿಯಾದೆ. 2006ರಲ್ಲಿ ನಾನು 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದೇನೆ. ಆ ಮೂಲಕ ನಾನು ನನ್ನ ಪಕ್ಷದ ಅಸ್ಥಿತ್ವದ ತೊಂದರೆಯನ್ನು ಕೂಡ ನಿವಾರಿಸಿದೆ. ಈಗ ನನ್ನ ಅಹಂಭಾವವನ್ನು ತೃಪ್ತಿಪಡಿಸಲು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಹುಚ್ಚು ಬಯಕೆ ನನಗಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.
ವಿಶ್ವಾಸಮತ ತೆಗೆದುಕೊಳ್ಳದೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪನವರಂತೆ ತರಾತುರಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೂಡ ಕುಮಾರಸ್ವಾಮಿ ಹೇಳಿದರು.
ನಾಳೆ ವಿಶ್ವಾಸಮತ ತೆಗೆದುಕೊಂಡು ಸರ್ಕಾರದ ಆಡಳಿತ ನಡೆಸುತ್ತೇನೆ. ನಿಮ್ಮೆಲ್ಲಾ ಸಂದೇಹ ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದೇ ಇಲ್ಲ ಎಂದು ಈ ಹಿಂದೆ ಸಿದ್ದರಾಮಯ್ಯನವರು ಹೇಳಿರುವುದು ಅಸಮಾಧಾನವುಂಟುಮಾಡಿದೆ ಎಂದು ತಮ್ಮ ತಾಯಿ ಚನ್ನಮ್ಮ ಹೇಳಿರುವ ಬಗ್ಗೆ ಕೇಳಿದಾಗ, ಚುನಾವಣೆ ಮುಗಿದು ಹೋಗಿ ಫಲಿತಾಂಶ ಬಂದು ಹೊಸ ಸರ್ಕಾರ ರಚನೆಯಾಗಿದೆ, ಈಗ ಅದೆಲ್ಲವೂ ಅಪ್ರಸ್ತುತ ವಿಷಯ. ಅವರು ರಾಜಕೀಯದಲ್ಲಿಲ್ಲ. ಅವರg ಏನೋ ಭಾವಿಸಿ ಮಾತನಾಡಿರಬಹುದು ಎಂದರು.
ಹಳೆಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಎಳೆದು ಹಾಕಿ ಆರೋಪ ಮಾಡುತ್ತಾ ಸಮಯ ಕಳೆಯುವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡಲು ಗಮನ ಕೊಡುತ್ತೇನೆ ಎಂದರು.
ಮಮತಾ ಬ್ಯಾನರ್ಜಿಯವರು ನಿನ್ನೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಬಗ್ಗೆ ಕೇಳಿದಾಗ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಸಿರಾ ತಾಲ್ಲೂಕಿನ ನಂಜವದೂತ ಸ್ವಾಮೀಜಿಗಳನ್ನು ಬೆಂಗಳೂರಿನ ಉಳ್ಳಾಲದಲ್ಲಿ ಭೇಟಿ ಮಾಡಿದ್ದರು.
Advertisement