ಬೆಂಗಳೂರು: ಜೂನ್ 11 ರಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ವಿಧಾನ ಸಭೆಯಿಂದ ಆಯ್ಕೆಯಾಗುವ 11 ಸ್ಥಾನಗಳಿಗೆ ಚುನಾವಣೆಗೆ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದು, ವಿಧಾನಸಭೆಯಲ್ಲಿ ಸಂಖ್ಯಾಬಲ ಆಧಾರದ ಮೇಲೆ ಬಿಜೆಪಿ ಐದು, ಕಾಂಗ್ರೆಸ್ ನಾಲ್ಕು ಹಾಗೂ ಜೆಡಿಎಸ್ ಎರಡು ಸ್ಥಾನ ಗೆಲ್ಲುವ ಅವಕಾಶವಿದೆ.
ಬಿಜೆಪಿಯಿಂದ ರಘುನಾಥ್ ರಾವ್ ಮಲ್ಕಾಪುರೆ, ತೇಜಸ್ವಿನಿ ಗೌಡ, ಎನ್.ರವಿಕುಮಾರ್, ಕೆ.ಪಿ.ನಂಜುಂಡಿ ಹಾಗೂ ಎಸ್.ರುದ್ರೇ ಗೌಡ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದೆ.
ಕಾಂಗ್ರೆಸ್‌ನಿಂದ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜು, ದಕ್ಷಿಣ ಕನ್ನಡ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ಅರವಿಂದಕುಮಾರ್ ಅರಳಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಜೆಡಿಎಸ್‌ನಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಬಿ.ಎ.ಫಾರೂಕ್ ಹಾಗೂ ಪಾಲಿಕೆಯ ಮಾಜಿ ಆಯುಕ್ತ ಡಾ.ಸುಬ್ರಹ್ಮಣ್ಯ ಅವರನ್ನು ಕಣಕ್ಕಿಳಿಸಲು ಬಹುತೇಕ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಆದರೆ ಕಾಂಗ್ರೆಸ್ ಪಟ್ಟಿಯಲ್ಲಿ ಎಂ ಆರ್ ಸೀತಾರಾಂ ಮತ್ತು ಮೋಟಮ್ಮ ಅವರ ಹೆಸರು ಪ್ರಕಟವಾಗಿಲ್ಲ, ಪಕ್ಷದ ಈ ನಿರ್ಧಾರದಿಂದ ನನಗೆ ಬೇಸರವಾಗಿದೆ ಎಂದು ಸೀತಾರಾಂ ಪ್ರತಿಕ್ರಿಯಿಸಿದ್ದಾರೆ.