ಶ್ರೀರಾಮುಲುಗೆ ವ್ಯಂಜನ, ಹೃಸ್ವಸ್ವರ, ದೀರ್ಘಸ್ವರ ಅಂದ್ರೇನು ಗೊತ್ತಾ?: ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಷ, ಲಕ್ಷ ಎಂಬ ಶಬ್ದಗಳನ್ನು ಸರಿಯಾಗಿ ಉಚ್ಛಾರಣೆ ...
ಶ್ರೀರಾಮುಲು, ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಶ್ರೀರಾಮುಲು, ಸಿದ್ದರಾಮಯ್ಯ(ಸಂಗ್ರಹ ಚಿತ್ರ)
Updated on

ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಷ, ಲಕ್ಷ ಎಂಬ ಶಬ್ದಗಳನ್ನು ಸರಿಯಾಗಿ ಉಚ್ಛಾರಣೆ ಮಾಡಲು ಬರುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಶ್ರೀರಾಮುಲು ಮಾಡಿರುವ ಟೀಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಿನ್ನೆ ಬಳ್ಳಾರಿಯಲ್ಲಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ನಾಲ್ಕೈದು ಬಾರಿ ಪಕ್ಷ, ಲಕ್ಷ ಎಂಬ ಶಬ್ದಗಳನ್ನು ಉಚ್ಛರಿಸಿ 'ನೋಡಿ, ನಾನು ಸರಿಯಾಗೇ ಕನ್ನಡವನ್ನು ಮಾತನಾಡುತ್ತೇನೆ. ವ್ಯಾಕರಣದಲ್ಲಿ ಸಂಯುಕ್ತಾಕ್ಷರ ಹೇಗೆ ಬಂತು? ಕ್ಷಕಾರ ಸ್ವತಂತ್ರ ಅಕ್ಷರವಾ? ಎಂಬ ಬಗ್ಗೆ ಶ್ರೀರಾಮುಲು ಉತ್ತರಿಸಲಿ' ಎಂದು ಶ್ರೀರಾಮುಲುಗೆ ಕನ್ನಡ ವ್ಯಾಕರಣದ ಸವಾಲು ಹಾಕಿದರು.

ಶ್ರೀರಾಮುಲು ಕನ್ನಡದ ಬಗ್ಗೆ ನನಗೆ ಹೇಳಿಕೊಡುತ್ತಾರೆ. ಸ್ವರ, ವ್ಯಂಜನ, ಹೃಸ್ವಸ್ವರ, ಅಲ್ಪಪ್ರಾಣ, ಮಹಾಪ್ರಾಣ ಇವುಗಳನ್ನೆಲ್ಲ ಅವರು ಎಂದಾದರೂ ಕೇಳಿದ್ದಾರಾ? ಇವುಗಳ ಅರ್ಥ ಗೊತ್ತಾ? ಎಂದು ಪ್ರಶ್ನಿಸುವ ಮೂಲಕ ಮತ್ತೆ ಕನ್ನಡ ಭಾಷೆ ಮತ್ತು ವ್ಯಾಕರಣ ಮೇಲಿನ ತಮ್ಮ ಹಿಡಿತವನ್ನು ವ್ಯಕ್ತಪಡಿಸಿದರು.

ಶ್ರೀರಾಮುಲು ಬಳ್ಳಾರಿಯಲ್ಲಿ ಹುಟ್ಟಿದ್ದಾರೆ ಎಂಬುದೇ ದೊಡ್ಡ ಅರ್ಹತೆಯಾ? ಬಳ್ಳಾರಿಯಲ್ಲಿ ಹುಟ್ಟಿ ಏನು ಉಪಯೋಗ? ಇಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ? ಉಗ್ರಪ್ಪ ರಾಜಕಾರಣಕ್ಕೆ ಬಂದಾಗ ಶ್ರೀರಾಮುಲು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮಯ ಸಿಕ್ಕಾಗಲೆಲ್ಲ ತಮ್ಮ ಸಹೋದ್ಯೋಗಿಗಳಿಗೆ ಕನ್ನಡದ ಸ್ವರ, ವ್ಯಂಜನ, ಅಲಂಕಾರಗಳ ಬಗ್ಗೆ ಹೇಳುವುದು ಸಾಮಾನ್ಯವಾಗಿತ್ತು. ಅದೇ ಸಿದ್ದರಾಮಯ್ಯನವರಿಗೆ ಪಕ್ಷ, ಲಕ್ಷ ಎಂಬ ಶಬ್ದಗಳನ್ನು ಸರಿಯಾಗಿ ಉಚ್ಛಾರಣೆ ಮಾಡಲು ಬರುವುದಿಲ್ಲ. ಸಿದ್ದರಾಮಯ್ಯನವರು ಆ ಪದಗಳನ್ನು ಸರಿಯಾಗಿ ಉಚ್ಛರಿಸಿದರೆ ನನ್ನ ಕನ್ನಡ ಸರಿಯಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಶ್ರೀರಾಮುಲು ಸವಾಲು ಹಾಕಿದ್ದರು.

ಜನಾರ್ದನ ರೆಡ್ಡಿಯವರನ್ನು ನಾನು ಬೇಕೆಂದೇ ಜೈಲಿಗೆ ಕಳುಹಿಸಿದೆ ಎಂಬ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರ ಜೀವನಶೈಲಿ ಹೇಗಿತ್ತು? ಎಷ್ಟು ವೈಭವದ ಜೀವನ ನಡೆಸುತ್ತಿದ್ದರು? ಅದಕ್ಕೆ ದುಡ್ಡು ಎಲ್ಲಿಂದ ಬಂತು ಎಂಬುದು ಇಡೀ ದೇಶಕ್ಕೇ ಗೊತ್ತು. ಯಾವ ಸಾಕ್ಷಿ, ದಾಖಲೆಯೂ ಇಲ್ಲದೆ ಜಾಮೀನೂ ನೀಡದೆ ಅಮಾಯಕರನ್ನು ಜೈಲಿನಲ್ಲಿ ಇಡಲು ಸಾಧ್ಯವಾ? ಅವರು ಅಮಾಯಕರಾಗಿದ್ದರೆ ಆಗಲೇ ಸಾಬೀತುಪಡಿಸಿಕೊಳ್ಳಬೇಕಾಗಿತ್ತು ಎಂದು ಜನಾರ್ದನ ರೆಡ್ಡಿ ವಿರುದ್ಧವೂ ಸಿದ್ದರಾಮಯ್ಯ ಕಿಡಿಕಾರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com