
ಬಳ್ಳಾರಿ: ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಮತದಾನ ಬಹಿಷ್ಕರಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹರಗಿನದೋಣಿ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಲವು ಸಮಯಗಳಿಂದ ಇದ್ದು ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ನಿನ್ನೆ ಬಳ್ಳಾರಿ ಲೋಕಸಭೆ ಉಪ ಚುನಾವಣೆ ವೇಳೆ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸಿದರೂ ಕೂಡ ಅದು ಗ್ರಾಮಸ್ಥರಿಗೆ ಸಾಕಾಗಲಿಲ್ಲ.
ನಮ್ಮ ಗ್ರಾಮದಲ್ಲಿರುವ ಬಹುತೇಕ ಬೋರ್ ವೆಲ್ ಗಳು ಬತ್ತಿ ಹೋಗಿವೆ. ನೀರು ಇರುವ ಬೋರ್ ವೆಲ್ ಗಳಲ್ಲಿ ಅಧಿಕ ಫ್ಲೋರೈಡ್ ಗಳಿವೆ. ಅದು ಕುಡಿಯಲು ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ತಮ್ಮ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮತದಾನ ಮಾಡುವುದಿಲ್ಲ ಎಂದು ಕಳೆದ ನಾಲ್ಕೈದು ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಅವರ ಎಚ್ಚರಿಕೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ನಿನ್ನೆ ಮತದಾನ ದಿನ ನೂರಾರು ಮಹಿಳೆಯರು ಖಾಲಿ ಕೊಡ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ನಿನ್ನೆ ನಡೆದ ಉಪ ಚುನಾವಣೆಯಲ್ಲಿ ಶ್ರೀರಾಮುಲು ಸೋದರಿ ಜೆ ಶಾಂತ ಬಿಜೆಪಿಯಿಂದ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ವಿ ಎಸ್ ಉಗ್ರಪ್ಪ ಸ್ಪರ್ಧಿಸಿದ್ದಾರೆ.
Advertisement