

ಬೆಂಗಳೂರು: ಮೂರು ಲೋಕಸಭೆ ಮತ್ತು 2 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ 4 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದು ಮೈತ್ರಿಕೂಟಗಳಿಗೆ ಅತಿ ದೊಡ್ಡ ಗೆಲುವಾಗಿದ್ದರೆ ಬಿಜೆಪಿಗೆ ಇದು ಎಚ್ಚರಿಕೆಯ ಘಂಟೆಯಾಗಿದೆ.
ಎಲ್ಲಾ ಕಳೆದ ಮೇಲೆ ಆಡುವ ಮಾತಿನಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಫಲಿತಾಂಶ ಹೊರಬಂದ ನಂತರ, ಸರ್ಕಾರದ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು ಹಣಬಲದಿಂದ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ಆರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಉಪ ಚುನಾವಣೆ ಫಲಿತಾಂಶ ನಂತರ ಹೆಚ್ಚಿನ ಸ್ಥಾನ ಗಳಿಸಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೆಚ್ಚು ಬಲ ಬಂದಂತಾಗಿದೆ.
2019ರ ಲೋಕಸಭೆ ಚುನಾವಣೆಗೆ ಕೂಡ ನಾವು ಮೈತ್ರಿ ಮಾಡಿಕೊಳ್ಳುತ್ತೇವೆ. ಕರ್ನಾಟಕದ ಎಲ್ಲಾ 28 ಲೋಕಸಭೆ ಸ್ಥಾನಗಳನ್ನು ಗೆಲ್ಲುವ ಗುರಿಯಿದ್ದು ಬಿಜೆಪಿ ವಿರುದ್ಧ ಒಟ್ಟಿಗೆ ಹೋರಾಡಲಿದ್ದೇವೆ ಎಂದರು. ಅಮಿತ್ ಶಾ-ಮೋದಿ ರಾಜಕೀಯವನ್ನು ಕರ್ನಾಟಕದಲ್ಲಿ ತಡೆಯಬಹುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉಪ ಚುನಾವಣೆ ಫಲಿತಾಂಶದ ನಂತರ ತಿಳಿಸಿದ್ದಾರೆ. ಇನ್ನು ಉಪ ಚುನಾವಣೆ ಫಲಿತಾಂಶದಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳನ್ನು ಒಟ್ಟು ಸೇರಿಸಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಪ್ರಮುಖ ಸ್ಥಾನ ನೀಡಲಿದೆ. ಈ ಹಿನ್ನಲೆಯಲ್ಲಿ ಇಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ದೇವೇಗೌಡರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಿದ್ದಾರೆ.
ಉಪ ಚುನಾವಣೆಯಲ್ಲಿ ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರಗಳಲ್ಲಿ ಗೆಲುವು ಮೈತ್ರಿ ಕೂಟಗಳಿಗೆ ಆನೆ ಬಲ ಬಂದಂತಾಗಿದೆ. ಇದೇ ರಾಜಕೀಯ ಮೈತ್ರಿ, ಹುರುಪನ್ನು ಕಾಪಾಡಿಕೊಂಡರೆ 2019ರ ಚುನಾವಣೆಯಲ್ಲಿ ಇದೇ ರೀತಿಯ ಸಾಧನೆಯನ್ನು ಮಾಡಬಹುದು ಎಂಬುದು ರಾಜಕೀಯ ತಜ್ಞರ ಅಭಿಮತವಾಗಿದೆ.
15 ವರ್ಷಗಳ ನಂತರ ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಸಿದುಕೊಂಡಿದೆ. ಅದು ಕೂಡ 2.28 ಲಕ್ಷಗಳ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ. 2014ರಲ್ಲಿ ಶ್ರೀರಾಮುಲು 84 ಸಾವಿರ ಮತಗಳ ಅಂತರದಿಂದ ಗೆದ್ದುಕೊಂಡಿದ್ದರೆ, ಅವರ ಸೋದರಿ ಜೆ ಶಾಂತಾ ಈ ಬಾರಿ ವಿ ಎಸ್ ಉಗ್ರಪ್ಪ ವಿರುದ್ಧ ಗೆದ್ದಿದ್ದಾರೆ.