

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ತನ್ನ ಅಧಿಕಾರದಿಂದ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಟೀಕಿಸುತ್ತಾ ಬಂದರೆ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತ್ರ ಅದನ್ನು ಒಪ್ಪುವುದಿಲ್ಲ. ಇದು ಮೈತ್ರಿಕೂಟಗಳ ನಡುವಿನ ಅಭಿಪ್ರಾಯ ಭೇದವನ್ನು ತೋರಿಸುತ್ತದೆ.
ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಕಿರುಕುಳ ನೀಡುವ ತಂತ್ರವಾಗಿ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ವ್ಯತಿರಿಕ್ತವಾಗಿದೆ. ಜಾರಿ ನಿರ್ದೇಶನಾಲಯದ ನೊಟೀಸ್ ಗೂ ತಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಜಾರಿ ನಿರ್ದೇಶನಾಲಯ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ನೊಟೀಸ್ ಹೊರಡಿಸಿರುವುದು ಕುತಂತ್ರತ ರಾಜಕೀಯ ಎಂದು ನಾನು ಕರೆಯುವುದಿಲ್ಲ. ಕಾನೂನಿನ ಚೌಕಟ್ಟಿನಡಿಯಲ್ಲಿ ಏನು ಮಾಡಬೇಕೊ ಅದನ್ನು ಜಾರಿ ನಿರ್ದೇಶನಾಲಯ ಮಾಡಿದೆ ಎಂದರು. ಇ ಡಿ ಜಾರಿಗೊಳಿಸಿದ ನೊಟೀಸ್ ಗೆ ಸಚಿವ ಶಿವಕುಮಾರ್ ಉತ್ತರಿಸಲಿದ್ದಾರೆ ಎಂದರು.
ಜಾರಿ ನಿರ್ದೇಶನಾಲಯ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಮೇಲೆ ಪ್ರತೀಕಾರ ತೀರಿಸಲು ಯತ್ನಿಸುತ್ತದೆ ಎಂದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಕುಮಾರಸ್ವಾಮಿ ಹೇಳಿಕೆ ವ್ಯತಿರಿಕ್ತವಾಗಿದೆ ಮತ್ತು ಮೈತ್ರಿಕೂಟದಲ್ಲಿದ್ದುಕೊಂಡು ನೀಡಿರುವ ಹೇಳಿಕೆ ಅಚ್ಚರಿಯನ್ನುಂಟುಮಾಡುತ್ತದೆ.
ಕೇಂದ್ರ ಸರ್ಕಾರ ಹೀಗೆ ಉದ್ದೇಶಪೂರ್ವಕವಾಗಿ ಮಾಡುತ್ತಿದೆ. ಇದೊಂದು ರಾಜಕೀಯ ಪ್ರೇರಿತ ಮತ್ತು ಕೇಂದ್ರ ತನಿಖಾ ಸಂಸ್ಥೆಯ ದುರುಪಯೋಗವಾಗಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕುತಂತ್ರ ರಾಜಕಾರಣದಲ್ಲಿ ತೊಡಗಿದ್ದು ಶಿವಕುಮಾರ್ ಅವರ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ ಕಾಂಗ್ರೆಸ್ ಸಂಸದ ವಿ ಎಸ್ ಉಗ್ರಪ್ಪ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.