ಹಾಸನದಲ್ಲಿ ಜೆಡಿಎಸ್'ಗೆ ಬೆಂಬಲ ನೀಡುವುದಿಲ್ಲ: ಕಾಂಗ್ರೆಸ್ ನಾಯಕ ಎ.ಮಂಜು

ಲೋಕಸಭಾ ಚುನಾವಣೆ ವೇಳೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್'ಗೆ ಬೆಂಬಲ ನೀಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ ಮಂಜು ಅವರು ಸೋಮವಾರ ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹಾಸನ: ಲೋಕಸಭಾ ಚುನಾವಣೆ ವೇಳೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್'ಗೆ ಬೆಂಬಲ ನೀಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ ಮಂಜು ಅವರು ಸೋಮವಾರ ಹೇಳಿದ್ದಾರೆ. 
ಅರಕಲಗೂಡಿನ ಹನ್ಯಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಗುರಿ ಮಾಡುತ್ತಿರುವ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಹೈ ಕಮಾಂಡ್ ಮೈತ್ರಿ ಮಾಡಿಕೊಂಡಿದ್ದು, ಇದು ಕಾರ್ಯಕರ್ತರ ಆಸೆಗಳಿಗೆ ವಿರುದ್ಧವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ನಮ್ಮ ಬೆಂಬಲವಿಲ್ಲ. 
ದೇವೇಗೌಡ ಅಥವಾ ಹಾಸನದಲ್ಲಿ ಕಣಕ್ಕಿಳಿಯುವ ಯಾವುದೇ ಜೆಡಿಎಸ್ ಅಭ್ಯರ್ಥಿಗೆ ನಾನು ಬೆಂಬಲ ನೀಡಿದರೆ, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನನ್ನನ್ನು ದೂಷಿಸುತ್ತಾರೆ. ದೇವೇಗೌಡ ಹಾಗೂ ಅವರ ಕುಟುಂಬವನ್ನು ಭವಿಷ್ಯದಲ್ಲಿಯೂ ವಿರೋಧಿಸುತ್ತೇನೆ. ಹೊಂದಾಣಿಕೆ ರಾಜಕೀಯ ನನಗೆ ಗೊತ್ತಿಲ್ಲ. ಜೆಡಿಎಸ್'ಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಹಿತಾಸಕ್ತಿಗಳನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದೇವೇಗೌಡ ಹಾಗೂ ಅವರ ಕುಟುಂಬಕ್ಕೆ ನಾನು ಬೆಂಬಲ ನೀಡುವುದಿಲ್ಲ. 
ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸುತ್ತೇನೆ. ಹಿರಿಯ ಕಾಂಗ್ರೆಸ್ ನಾಯಕರ ನಿರ್ಧಾರಕ್ಕಾಗಿ ಕಾಯುತ್ತೇನೆಂದು ತಿಳಿಸಿದ್ದಾರೆ. 
ಮಂಜು ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಅವರು, ರಾಜ್ಯದ ಹಿತಾಸಕ್ತಿಗನುಗುಣುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೀತಿಗಳನ್ನು ಅನುಸರಿಸುತ್ತಿದೆ. ಮೈತ್ರಿ ಸರ್ಕಾರದ ಅಭ್ಯರ್ಥಿಗೆ ಬೆಂಬಲ ನೀಡುವುದು, ಬಿಡುವುದು ಮಂಜು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com