ಜಾರಕಿಹೊಳಿ ಬ್ರದರ್ಸ್-ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಕಿತ್ತಾಟ: ಸಮ್ಮಿಶ್ರ ಸರ್ಕಾರಕ್ಕೆ ಕುತ್ತು?

ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಮುಖ್ಯಸ್ಥರ ಹುದ್ದೆ ಚುನಾವಣೆಗೆ ಸಂಬಂಧಿಸಿದಂತೆ ...
ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಇಲ್ಲಿನ ಪ್ರಾಥಮಿಕ ಭೂ ಅಭಿವೃದ್ಧಿ(ಪಿಎಲ್ ಡಿ) ಬ್ಯಾಂಕ್ ಮುಖ್ಯಸ್ಥರ ಹುದ್ದೆ ಚುನಾವಣೆಗೆ ಸಂಬಂಧಿಸಿದಂತೆ ಜಾರಕಿಹೊಳಿ ಸೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ನಡೆದ ಕಲಹ, ಮನಸ್ತಾಪ, ಕಿತ್ತಾಟಗಳಿಂದ ಸಮ್ಮಿಶ್ರ ಸರ್ಕಾರದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಿಎಲ್ ಡಿ ಬ್ಯಾಂಕಿನ ಮುಖ್ಯಸ್ಥರ ಚುನಾವಣೆ ನಾಳೆ ನಡೆಯಲಿದ್ದು ರಾಜ್ಯ ರಾಜಕೀಯದಲ್ಲಿ ಪ್ರಭಾವ ಹೊಂದಿರುವ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಸೋದರರು, ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ ಚುನಾವಣೆ ನಂತರ ತಮ್ಮ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಜಾರಕಿಹೊಳಿ ಸೋದರರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಿವಾದ ಜಾಸ್ತಿಯಾಗಿದ್ದು ಅದು ರಾಜ್ಯ ರಾಜಕೀಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಜಾರಕಿಹೊಳಿ ಸೋದರರಿಗೆ ತೀವ್ರ ಮುಜುಗರವನ್ನುಂಟುಮಾಡುವ ರೀತಿಯಲ್ಲಿ ಹೈಕೋರ್ಟ್ ಬ್ಯಾಂಕಿನ ನಿರ್ದೇಶಕರ ಮಂಡಳಿಗೆ ತಕ್ಷಣವೇ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದೆ. ಜಾರಕಿಹೊಳಿ ಸೋದರರ ಪರವಾಗಿ ಸ್ಥಳೀಯ ಅಧಿಕಾರಿಗಳು ಇದುವರೆಗೆ ಪಿಎಲ್ ಡಿ ಬ್ಯಾಂಕಿನ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ಚುನಾವಣೆಯನ್ನು ತಡೆಹಿಡಿದಿದ್ದರು ಎನ್ನಲಾಗುತ್ತಿದೆ. ಇದರಿಂದ ಆಕ್ರೋಶಗೊಂಡು ಲಕ್ಷ್ಮಿ ಹೆಬ್ಬಾಳ್ಕರ್ ಅಹೋರಾತ್ರಿ ತಹಶಿಲ್ದಾರ್ ಕಚೇರಿಯ ಎದುರು ಧರಣಿ ನಡೆಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಜಾರಕಿಹೊಳಿ ಆಪ್ತರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ಹೈಕೋರ್ಟ್ ನ ತೀರ್ಪಿನಿಂದ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಗುಂಪಿನ ಮಧ್ಯೆ ಅಂತರ ಇನ್ನಷ್ಟು ಹೆಚ್ಚಾಗಲಿದ್ದು ಗಂಭೀರ ಪರಿಣಾಮಕ್ಕೆ ತಿರುಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ.
 
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಚಿವ ಡಿ ಕೆ ಶಿವಕುಮಾರ್ ಬೆಂಬಲ ನೀಡಿದ್ದು ಜಾರಕಿಹೊಳಿ ಸೋದರರಿಗೆ ಇನ್ನಷ್ಟು ಅಸಮಾಧಾನವುಂಟುಮಾಡಿದೆ. ಮೂಲಗಳ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಹಲವು ಶಾಸಕರ ಬೆಂಬಲ ಹೊಂದಿರುವ ಜಾರಕಿಹೊಳಿ ಸೋದರರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ನ್ನು ತೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಸಚಿವ ಡಿ ಕೆ ಶಿವಕುಮಾರ್ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಬಹಿರಂಗವಾಗಿ ಬೆಂಬಲ ನೀಡಿದ್ದು ಮಾತ್ರವಲ್ಲದೆ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಮಧ್ಯೆ ಪ್ರವೇಶಿಸಿರುವುದು ಜಾರಕಿಹೊಳಿ ಸೋದರರನ್ನು ಕೆರಳಿಸಿದೆ ಎನ್ನಲಾಗುತ್ತಿದೆ.

ಇವರಿಬ್ಬರ ಜಗಳ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ತರಲಿದೆಯೇ ಎಂದು ಕೇಳಿದರೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿ, ಈಗಲೇ ನಾನು ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ನಾಳೆ ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾಗುವವರೆಗೆ ಎಲ್ಲವನ್ನೂ ಕಾದುನೋಡಬೇಕು ಎನ್ನುತ್ತಾರೆ.

ಇನ್ನೊಂದೆಡೆ ಇಷ್ಟೆಲ್ಲಾ ಆಗಿದ್ದರೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಮೌನವಾಗಿದ್ದಾರೆ. ನಿನ್ನೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾಳೆ ಚುನಾವಣೆ ಮುಗಿಯುವವರೆಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ತಮಗೆ ಸೂಚಿಸಿದ್ದಾರೆ. ಇನ್ನೆರಡು ದಿನಗಳು ಕಳೆದ ನಂತರವಷ್ಟೇ ನಾನು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವೆ. ಈ ವಿವಾದ ವಿಷಯ ಈಗಾಗಲೇ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿದೆ. ಆದರೆ ಕಾಂಗ್ರೆಸ್ ಪಕ್ಷದ ಮೂಲಗಳಿಗೆ ಜಾರಕಿಹೊಳಿ ಸೋದರರು ಸರ್ಕಾರವನ್ನು ಅಸ್ಥಿರಗೊಳಿಸಲಿಕ್ಕಿಲ್ಲ ಎಂಬ ವಿಶ್ವಾಸವಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಸಚಿವ ಡಿ ಕೆ ಶಿವಕುಮಾರ್ ಬೆಳಗಾವಿ ಕಾಂಗ್ರೆಸ್ ನಲ್ಲಿ ಮಧ್ಯೆ ಪ್ರವೇಶಿಸುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಆರೋಪವನ್ನು ನಿರಾಕರಿಸಿದ್ದಾರೆ. ಬೇರೆಯವರ ವಿಷಯಕ್ಕೆ ಮೂಗು ತೂರಿಸುವುದು ನನ್ನ ಅಭ್ಯಾಸವಲ್ಲ. ಪಕ್ಷದ ಹೈಕಮಾಂಡ್ ಹೇಳಿದ್ದಷ್ಟನ್ನೇ ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಹಣಕಾಸಿನ ವಿಚಾರ ಕದನಕ್ಕೆ ಕಾರಣವೇ?: ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ 14 ನಿರ್ದೇಶಕರ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ 9 ಮಂದಿಗೆ ಬೆಂಬಲ ಸೂಚಿಸುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರು. ಕಳೆದ ಆಗಸ್ಟ್ 28ಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ ನಿರ್ದೇಶಕರೊಬ್ಬರ ಅಪಹರಣವಾಗಿದೆ ಎಂದು ಕಾಕಟಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾದ ಕಾರಣ ತಹಶಿಲ್ದಾರ್ ಅವರು ಹಠಾತ್ತಾಗಿ ಚುನಾವಣೆಯನ್ನು ಮುಂದೂಡಿದ್ದರು. ಇದನ್ನು ವಿರೋಧಿಸಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಬೆಂಬಲಿತ ನಿರ್ದೇಶಕರೊಂದಿಗೆ ತಹಶಿಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು. ಜಾರಕಿಹೊಳಿ ಸೋದರರ ಪಿತೂರಿಯಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದರು.

ವಿವಾದ ನ್ಯಾಯಾಲಯ ಮೆಟ್ಟಿಲೇರಿತ್ತು. ಕಳೆದ ಮಂಗಳವಾರ ತೀರ್ಪು ನೀಡಿದ ಹೈಕೋರ್ಟ್ ನ ಧಾರವಾಡ ವಿಭಾಗೀಯ ಪೀಠ, ಸೆಪ್ಟೆಂಬರ್ 7ರೊಳಗೆ ಚುನಾವಣೆ ನಡೆಸಬೇಕೆಂದು ಹೇಳಿತು. ಈ ಎಲ್ಲಾ ಬೆಳವಣಿಗೆ ಹಿಂದೆ ಹಣದ ವಿಚಾರ ಮುಖ್ಯ ಕಾರಣವಾಗಿದೆ ಎಂಬುದು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರ ಆರೋಪ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಸಕ್ಕರೆ ಕಾರ್ಖಾನೆಯ ನಿರ್ಮಾಣಕ್ಕೆ ಮೂರು ಬ್ಯಾಂಕುಗಳಿಂದ ಸುಮಾರು 200 ಕೋಟಿ ರೂಪಾಯಿ ಸಾಲ ಪಡೆದಿದ್ದರು ಮತ್ತು ಅದರಲ್ಲಿ ಸ್ವಲ್ಪ ಹಣವನ್ನು ಜಾರಕಿಹೊಳಿ ಸೋದರರಿಗೆ ಮಹಾರಾಷ್ಟ್ರದಲ್ಲಿ ತಮ್ಮ ಸ್ವಂತ ಕಾರ್ಖಾನೆ ಸ್ಥಾಪಿಸಲು ಜಾರಕಿಹೊಳಿ ಸೋದರರಿಗೆ ನೀಡಿದ್ದರು. ಆದರೆ ಪಡೆದುಕೊಂಡ ಸಾಲವನ್ನು ಹಿಂತಿರುಗಿಸಲು ಜಾರಕಿಹೊಳಿ ಸೋದರರು ನಿರಾಕರಿಸಿದ್ದು ಈ ಎಲ್ಲಾ ಕಲಹ, ವಾದ-ವಿವಾದಗಳಿಗೆ ಮೂಲ ಕಾರಣ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com