ಹೆಬ್ಬಾಳ್ಕರ್-ಜಾರಕಿಹೊಳಿ ಸಮಸ್ಯೆ ಇತ್ಯರ್ಥವಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿ

ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿದ್ದ ಭಿನ್ನಾಭಿಪ್ರಾಯ ಶಮನವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ: ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿದ್ದ ಭಿನ್ನಾಭಿಪ್ರಾಯ ಶಮನವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ವಾಕ್ಸಮರದಿಂದ ಕದನ ಕುತೂಹಲ ಮೂಡಿಸಿದ್ದ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣ ಮೇಲುಗೈ ಸಾಧಿಸಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಹೆಬ್ಬಾಳ್ಕರ್ ಬಣದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೂ ಲಕ್ಷ್ಮೀ ಬಣದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಂಧಾನದ ಬಳಿಕ ಜಾರಕಿಹೊಳಿ ಬೆಂಬಲಿಗರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಲಕ್ಷ್ಮೀ ಬಣ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ.
ಆಯ್ಕೆ ಪ್ರಕ್ರಿಯೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು. ಬೆಳಗಾವಿಯ ಸರ್ಕೀಟ್ ಹೌಸ್ ನಲ್ಲಿ ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಹೆಬ್ಬಾಳ್ಕರ್-ಜಾರಕಿಹೊಳಿ ಸಮಸ್ಯೆ ಇತ್ಯರ್ಥವಾಗಿದೆ. ಸೌಹಾರ್ದತೆಯಿಂದ ಎಲ್ಲವೂ ಬಗೆಹರಿದಿದೆ.
ಭಿನ್ನಾಭಿಪ್ರಾಯದಿಂದ ಚುನಾವಣೆ ಮುಂದೂಡಿಕೆಯಾಗಿತ್ತು. ವರಿಷ್ಠರ ಸೂಚನೆಯಂತೆ ಸಮಸ್ಯೆ ಬಗೆಹರಿದಿದೆ. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರನ್ನೂ ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಖಂಡ್ರೆ ಹೇಳಿದರು.
ಅಂತೆಯೇ ಇಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಕಾಂಗ್ರೆಸ್ ಒಟ್ಟಾಗಿದ್ದು, ಕೇವಲ ಸಂವಹನ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿತ್ತು. ಇದೀಗ ಪರಸ್ಪರ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ ಎಂದು ಖಂಡ್ರೆ ಹೇಳಿದರು.
ವೈಯುಕ್ತಿಕ ಟೀಕೆಗಳಿಗೆ ಉತ್ತರಿಸಲ್ಲ, ಭಗವಂತ ನೋಡಿಕೊಳ್ಳುತ್ತಾನೆ: ಲಕ್ಷ್ನೀ ಹೆಬ್ಬಾಳ್ಕರ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ಖಂಡ್ರೆ ನೇತೃತ್ವದಲ್ಲಿ ಸಮಸ್ಯೆ ಬಗೆಹರಿದಿದೆ. ಪಕ್ಷದ ಹಿತದೃಷ್ಟಿಯಿಂದ ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ. ನಮ್ಮಲ್ಲಿ ಯಾವುದೇ ಬಣವಿಲ್ಲ, ಕಾಂಗ್ರೆಸ್ ಪಕ್ಷದ ಹಿತ ಮುಖ್ಯವಾಗಿದ್ದು, ಲೋಕಸಭೆ ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಲಿದ್ದೇವೆ ಎಂದರು.
ಬಳಿಕ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿವಾದ ಸುಖಾಂತ್ಯ ಸಂತಸ ತಂದಿದೆ. ಅವಿರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವೈಯುಕ್ತಿಕ ಟೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com