

ಮೈಸೂರು: ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ತೆರೆಮರೆಯಲ್ಲಿ ಅಪರೇಷನ್ ಕಮಲಕ್ಕೆ ಯತ್ನ ನಡೆಸುತ್ತಿದೆ ಎಂಬ ಸುದ್ದಿ ಹರಡಿರುವ ಬೆನ್ನಲ್ಲೆ 'ಬಿಜೆಪಿಯ 10 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ' ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳುವ ಮೂಲಕ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್ 'ನಾನೂ ಬಿಜೆಪಿಯಲ್ಲಿ 10 ವರ್ಷ ಇದ್ದವನು. ನಮಗೂ ರಾಜಕಾರಣ ಮಾಡಲು ಬರುತ್ತೆ. ಬಿಜೆಪಿಯ ಕೆಲ ನಾಯಕರಿಗೆ ಈಗ ಅಧಿಕಾರದ ಆಸೆ ಹಿಡಿದಿದೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ' ಎಂದರು.
'ನಮಗೂ ಶಕ್ತಿ ಇದೆ, ಬಿಜೆಪಿಯ ತಂತ್ರಗಳನ್ನು ಎದುರಿಸುವ ಶಕ್ತಿ ನಮಗಿದೆ. ನಮ್ಮ ನಾಯಕರ ಸಾಮರ್ಥ್ಯವನ್ನು ತೋರಿಸಬೇಕಾಗುತ್ತದೆ' ಎಂದರು.
ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸಿದರೆ,ಆ ಪಕ್ಷದ ಐವರು ಶಾಸಕರಿಂದ ರಾಜೀನಾಮೆ ಕೊಡಿಸುವುದು ನಮಗೆ ಗೊತ್ತಿಲ್ಲವೇ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವ ಸಾ.ರಾ.ಮಹೇಶ್ ಈ ಹೇಳಿಕೆ ನೀಡಿದ್ದಾರೆ.
ನಾವು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಷ್ಟೇ ಆಗಿದೆ. ಈ ನಡುವೆ ಕೆಲ ಬಿಜೆಪಿ ಮುಖಂಡರು ಅಧಿಕಾರದ ಆಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಇಲ್ಲ ಸಲ್ಲದ ಆಸೆ ತೋರಿಸಿ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಲ್ಲಿ ಒಬ್ಬರನ್ನ ಸೆಳೆಯಲು ಯತ್ನಿಸಿದ್ರೆ, ಜೆಡಿಎಸ್ ನಾಯಕರು ಮತ್ತು ಮುಖಂಡರ ಶಕ್ತಿ ಏನು ಅಂತಾ ಗೊತ್ತಾಗುತ್ತೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನಿಸಿದರು.
Advertisement