ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇದು ನಮ್ಮದೇ ಸರ್ಕಾರನಾ? ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚಿಸಿದೆಯಾ? ಕಾಂಗ್ರೆಸ್ ಶಾಸಕರ ಆಕ್ರೋಶ

ಅಕ್ಟೋಬರ್ 4 ರಂದು ನಡೆಯುವ ವಿಧಾನ ಪರಿಷತ್ ಉಪ ಚುನಾವಣೆ ಸಂಬಂಧ ಚರ್ಚಿಸಲು ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ...
ಬೆಂಗಳೂರು:  ಅಕ್ಟೋಬರ್ 4 ರಂದು ನಡೆಯುವ ವಿಧಾನ ಪರಿಷತ್ ಉಪ ಚುನಾವಣೆ ಸಂಬಂಧ ಚರ್ಚಿಸಲು ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸಭೆಯಲ್ಲಿ ಕುಮಾರ ಸ್ವಾಮಿ ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಯಿತು.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರ ಪಕ್ಷವಾಗಿದೆಯೇ? ಅಥವಾ ಜೆಡಿಎಸ್ ಸ್ವತಂತ್ರ್ಯವಾಗಿ ಸರ್ಕಾರ ರಚಿಸಿದೆಯೇ, ಇದು ನಮ್ಮದೇ ಸರ್ಕಾರವಾ ಎಂಬ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಕಿಡಿ ಕಾರಿದ್ದಾರೆ. 
ಶಾಸಕ ಕೆ. ಸುಧಾಕರ್ ನೇರವಾಗಿಯೇ ಪ್ರಶ್ನಿಸಿದ್ದಾರೆ, ನಮ್ಮ ಶಾಸಕರ ಯಾವುದೇ ಕೆಲಸಗಳು ಸುಗಮವಾಗಿ ನಡೆಯತ್ತಿಲ್ಲ, ಯಾವುದೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,  ಸರ್ಕಾರ ಅನುದಾನ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಕೂಡ, ಸಣ್ಣ ರಸ್ತೆ ಕೆಲಸ ಮಾಡಿಸಿಕೊಡುವಂತೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ, ಸಿದ್ದರಾಮಯ್ಯ ಕೂಡ ಸ್ವತಃ ಪತ್ರ ಬರೆದರೂ ಕವಡೆ ಕಿಮ್ಮತ್ತಿಲ್ಲ,  ಕಾಂಗ್ರೆಸ್ ಶಾಸಕರನ್ನು ಸರಿಯಾಗಿ ನಡೆಸಿಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರೋಷನ್ ಬೇಗ್ ಸೇರಿದಂತೆ ಹಲವು ಶಾಸಕರು  ಸಭೆಯಲ್ಲಿ ಭಾಗವಹಿಸಿರಲಿಲ್ಲ,  ಬಿ.ಸಿ ಪಾಟೀಲ್, ಸುಧಾಕರ್, ಎಂ.ಟಿ.ಬಿ ನಾಗರಾಜ್ ಮತ್ತು ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ  ಸೇರಿದಂತೆ ಹಲವು ಶಾಸಕರು ಗೈರಾಗಿದ್ದರು.  ಆದರೆ ಯಾರದೇ ಹೆಸರು ಹೇಳದೇ ಪರೋಕ್ಷವಾಗಿ ಡಿಸಿಎಂ ಡಿ ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವರ್ಗಾವಣೆ, ಅನುಧಾನ, ಸೇರಿದಂತೆ ಯಾವುದೇ ವಿಚಾರಗಳಿಗೆ  ಸಮ್ಮಿಶ್ರ ಸರ್ಕಾರದ ಶಾಸಕರನ್ನು  ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ,  ಆದರೆ ಸಿದ್ದರಾಮಯ್ಯ ಈ ವಿಷಯವನ್ನು ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು. 
ಇನ್ನು ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಲ್ ಪಿ ಸಭೆ ಕರೆಯಲಾಗಿತ್ತು, ಆದರೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಹಿಂದೆ ಸರಿದಿದೆ. ಆದರೆ ಉಪ ಚುನಾವಣೆ ವಿಷಯವನ್ನು ಚರ್ಚೆ ಮಾಡಲೇ ಇಲ್ಲ, ಮೊದಲಿಗೆ ಎದ್ದು ನಿಂತ ಶಾಸಕ ಎಸ್ ಟಿ ಸೋಮಶೇಖರ್ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿದರು, ತಮ್ಮ ಸಮಸ್ಯೆಗಳ ಬಗ್ಗೆ ನಾಯಕರ ಗಮನಕ್ಕೆ ತಂದರು. 
ಕೇವಲ ಆರು ಸಚಿವ ಸ್ಥಾನ ಖಾಲಿಯಿವೆ, ಆದರೆ ಹಲವು ಆಕಾಂಕ್ಷಿಗಳಿದ್ದಾರೆ, ಈ ಬಗ್ಗೆ ಹೈಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಬಿಯ ಜಮೀರ್ ಅಹ್ಮದ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com