ಸಾಂದರ್ಭಿಕ ಚಿತ್ರ
ರಾಜಕೀಯ
ಕಿಸಾನ್ ಸಮ್ಮಾನ್ ಯೋಜನೆಗಾಗಿ ಕಾಂಗ್ರೆಸ್, ಮೈತ್ರಿ ಸರ್ಕಾರದ ಯೋಜನೆಗೆ ಎಳ್ಳು ನೀರು?
ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಿಗೆ ಎಳ್ಳು ನೀರು ಬಿಡಲು ಬಿಜೆಪಿ ಸರ್ಕಾರ ಮುಂದಾಗಿದೆ.
ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಎರಡು ಕಂತಿನಲ್ಲಿ 4 ಸಾವಿರ ರೂ. ನೀಡುವ ಘೋಷಣೆ ಮಾಡಿದೆ. ಆದರೆ, ಯೋಜನೆ ಜಾರಿಗೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಈ ಕೊರತೆ ನೀಗಿಸಲು ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಿಗೆ ಎಳ್ಳು ನೀರು ಬಿಡಲು ಬಿಜೆಪಿ ಸರ್ಕಾರ ಮುಂದಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ರಾಜ್ಯಸರ್ಕಾರ 4 ಸಾವಿರ ರೂ. ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಘೋಷಿಸಿದ್ದಾರೆ. ಆದರೆ, ಯೋಜನೆ ಜಾರಿಗಾಗಿ 2200 ಕೋಟಿ ರೂ. ಗಳ ಅನುದಾನದ ಅಗತ್ಯವಿದೆ. ಮಧ್ಯಂತರ ಆರ್ಥಿಕ ವರ್ಷದಲ್ಲಿ ದೊಡ್ಡ ಮೊತ್ತದ ಅನುದಾನ ಕ್ರೊಢೀಕರಣ ಕಷ್ಟಸಾಧ್ಯವಾಗಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ.
ಆರ್ಥಿಕ ಇಲಾಖೆ ಅಧಿಕಾರಿಗಳ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಯಡಿಯೂರಪ್ಪ ಹೇಗಾದರೂ ಮಾಡಿ ಅನುದಾನ ಹೊಂದಿಸುವಂತೆ ಆರ್ಥಿಕ ಹಾಗೂ ಇತರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಅವರ ಸಲಹೆ ಮೇರೆಗೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರ ಘೋಷಿಸಿದ ಹಾಗೂ ಅನುಷ್ಟಾನವಾಗದೆ ಇರುವ ಯೋಜನೆಗಳಿಗೆ ಬ್ರೇಕ್ ಹಾಕಿ ಆ ಅನುದಾನವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.
ಸಾಲಮನ್ನಾ ಯೋಜನೆಗಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಅನರ್ಹ ಸಾಲಗಳಿಂದ ಅಂದಾಜು 5 ಸಾವಿರ ಕೋಟಿ ರೂ. ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಎರಡು ಕಡೆಗಳಲ್ಲಿ ಸಾಲ ಪಡೆದ ಅನರ್ಹಗೊಂಡಿರುವ ರೈತರ ಖಾತೆಯಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 3 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ. ಅಲ್ಲದೇ ಅಸ್ತಿತ್ವದಲ್ಲಿರುವ ರೈತರ ಸಾಲಗಳನ್ನು ಹೊರತುಪಡಿಸುವುದರಿಂದ ಆರ್ಥಿಕ ಇಲಾಖೆಗೆ 150 ಕೋಟಿ ರೂ. ಉಳಿತಾಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂದಿನ 10 ದಿನಗಳ ಒಳಗಾಗಿ ರೈತರ ಖಾತೆಗೆ 2 ಸಾವಿರ ರೂ. ಹಣವನ್ನು ಜಮಾ ಮಾಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಹೀಗಾಗಿ 8 ದಿನಗಳ ಒಳಗಾಗಿ 1100 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಹಣಕಾಸಿನ ಕೊರತೆ ಸರಿದೂಗಿಸಲು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮ ಹಾಗೂ ಮೈತ್ರಿ ಸರ್ಕಾರದ ಘೋಷಿಸಿ ಅನುಷ್ಠಾನಗೊಳಿಸದಿರುವ ಯೋಜನೆಗಳ ಅನುದಾನವನ್ನು ಬಳಸಿಕೊಳ್ಳಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಜುಲೈ 26 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಇತರ ಇಲಾಖೆಗಳ ಯೋಜನೆ ಕಡಿತಗೊಳಿಸಿ ಅನುದಾನವನ್ನು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ಮುಂದಿನ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಮಂಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗಾಗಿ ಕಾಂಗ್ರೆಸ್, ಮೈತ್ರಿ ಸರ್ಕಾರದ ಯೋಜನೆಗೆ ಎಳ್ಳು ನೀರು ಬಿಡುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ