ಯಾವುದೇ ಅಸಮಾಧಾನ ಇಲ್ಲ, ಎಲ್ಲವನ್ನು ನೀವೇ ನಿರ್ಧಾರ ಮಾಡುತ್ತಿದ್ದೀರಾ: ಸಿಟಿ ರವಿ ಕಿಡಿ
ಖಾತೆ ಹಂಚಿಕೆ ಬೆನ್ನಲ್ಲೇ ಸಿಟಿ ರವಿ ಅಸಮಾಧಾನ ಎಂದು ಮಾಧ್ಯಮಗಳ ವರದಿ
ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕುರಿತಂತೆ ತಮಗೆ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಪ್ರವಾಸೋಧ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ಮಾಧ್ಯಮವೊಂದು ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಸಚಿವ ಸಿಟಿ ರವಿ ಅವರು ಡಿಸಿಎಂ ಹುದ್ದೆ ಸಿಗದ ಹಿನ್ನಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ ಎಂದು ವರದಿ ಮಾಡಿತ್ತು. ಅಲ್ಲದೆ ಸರ್ಕಾರಿ ಕಾರನ್ನು ಕೂಡ ಸಿಟಿ ರವಿ ಈಗಾಗಲೇ ವಾಪಸ್ ಕಳುಹಿಸಿದ್ದಾರೆ. ತಮಗೆ ನೀಡಿದ್ದ ಪ್ರವಾಸೋದ್ಯಮ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನ ಪಡೆಯುವಲ್ಲಿಯೂ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿ ಮಾಡಿತ್ತು.
ಈ ವರದಿ ಕುರಿತಂತೆ ಮಾತನಾಡಿರುವ ಸಚಿವ ಸಿಟಿ ರವಿ, 'ನನಗೆ ಯಾವುದೇ ಅಸಮಾಧಾನ ಇಲ್ಲ. ಎಲ್ಲವನ್ನು ನೀವೇ ನಿರ್ಧಾರ ಮಾಡುತ್ತಿದ್ದೀರಾ. ನನ್ನ ಫೋನ್ ಬ್ಯಾಟರಿ ಡೆಡ್ ಆಗಿದ್ದರಿಂದ ಸ್ವಿಚ್ ಆಫ್ ಆಗಿತ್ತು. ಪಕ್ಷ ನಿಷ್ಠೆ ಬಗ್ಗೆ ನನಗೆ ಯಾರು ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ' ಎಂದು ಕಿಡಿಕಾರಿದ್ದಾರೆ. ಅಂತೆಯೇ ನೀವು ಮಂಗಳವಾರ ರಾಜೀನಾಮೆ ಕೊಡುವುದು ನಿಜವೇ ಎಂಬ ಪ್ರಶ್ನೆಗೆ ಯಾವುದೇ ಸ್ಪಷ್ಟ ಉತ್ತರ ನೀಡಲು ಸಿಟಿ ರವಿ ನಿರಾಕರಿಸಿದರು.
ಅಂತೆಯೇ ಅಸಮಾಧಾನ ವರದಿಗಳ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಸಿಟಿ ರವಿ, ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ, ಸತ್ತರೂ ಬಿಜೆಪಿಯಲ್ಲೇ. ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ ಎಂದು ಹೇಳಿದ್ದಾರೆ.
ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ ಸತ್ತರೂ ಬಿಜೆಪಿ.
— C T Ravi
ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ