ಬಿಜೆಪಿ ಧಾರ್ಮಿಕ ವಿವಾದಗಳನ್ನು ಸೃಷ್ಟಿಸುತ್ತಿದೆ: ಡಿಕೆ.ಶಿವಕುಮಾರ್

ಬಿಜೆಪಿ ಸುಖಾಸುಮ್ಮನೆ ಧಾರ್ಮಿಕ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್
Updated on

ಬೆಂಗಳೂರು: ಬಿಜೆಪಿ ಸುಖಾಸುಮ್ಮನೆ ಧಾರ್ಮಿಕ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಡಿಕೆ.ಶಿವಕುಮಾರ್ ಅವರು ಶಂಕು ಸ್ಥಾಪನೆ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕಪಾಲಬೆಟ್ಟ ಅಭಿವೃದ್ಧಿ ಸಮಿತಿಗೆ ಮಂಜೂ ಮಾಡಲಾಗಿದ್ದ 10 ಎಕರೆ ಜಮೀನಿನಲ್ಲಿ ಒಂದು ಧರ್ಮಕ್ಕೆ ಸೇರಿದ ದೇವರ ಪ್ರತಿಮೆ ಮಾಡುವುದಕ್ಕೆ ಮುಂದಾಗಿರುವುದು ಇದೀಗ ವಿವಾದ ಹುಟ್ಟುವಂತೆಮಾಡಿದೆ.

ಈ ಹಿನ್ನೆಲೆಯಲ್ಲಿ ನ್ಯೂಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು ಡಿಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ನೀಡಿದ್ದ ಭರವಸೆಯನ್ನಷ್ಟೇ ಈಡೇರಿಸಿದ್ದೇನೆ. ಬಿಜೆಪಿ ಸುಖಾಸುಮ್ಮನೆ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ. 

ಪ್ರತಿಮೆ ನಿರ್ಮಾಣವು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಳ್ಳಲು ಉತ್ತೇಜನ ನೀಡುತ್ತದೆ ಎಂಬ ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಗ್ರಾಮದಲ್ಲಿ ಪ್ರಸ್ತುತ ಇರುವುದು ಕ್ರಿಶ್ಚಿಯನ್ನರೇ. 400-500 ವರ್ಷಗಳಿಂದಲೂ ಇಲ್ಲಿ ವಾಸವಿದ್ದಾರೆ. ವಾಸ್ತವತೆಯೇ ಹೀಗಿರುವಾಗ ಮತಾಂತಗೊಳ್ಳುವುದಾದರೂ ಹೇಗೆ? ಇಲ್ಲಿರುವ ಜನರೇ ಏಸುಕ್ರಿಸ್ತನಿಗೆ ಪಾರ್ಥನೆ ಸಲ್ಲಿಸುತ್ತಿದ್ದಾರೆ. ವಿಚಾರವಲ್ಲದ ವಿಚಾರಕ್ಕೆ ಬಿಜೆಪಿ ವಿವಾದ ಸೃಷ್ಟಿಸುತ್ತಿದೆ. ಮತಗಳನ್ನು ಪಡೆಯಲು ಯತ್ನಿಸುತ್ತಿದೆ. ಸುಳ್ಳುಗಳನ್ನು ಹೇಳಿ, ಜನರು ನಂಬುವಂತೆ ಮಾಡುತ್ತಿದ್ದಾರೆ. ಹುಬ್ಬಳ್ಳಿ ಹಾಗೂ ದತ್ತ ಪೀಠ ವಿಚಾರವನ್ನು ಎಳೆಯುತ್ತಿದೆ ಎಂದು ಹೇಳಿದ್ದಾರೆ. 

ಕನಕಪುರ ಕ್ರಿಶ್ಚಿಯನ್ ಸಂಸ್ಥೆಯಲ್ಲಿ ನಾನು ನನ್ನ ಭವಿಷ್ಯವನ್ನು ಆರಂಭಿಸಿದ್ದೆ. ಐಟಿ ಹಾಗೂ ಇಡಿ ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದಾಗ ಇಲ್ಲಿನ ಜನರೇ ಹಗಲು ರಾತ್ರಿ ಪಾರ್ಥನೆ ಮಾಡಿದ್ದಾರೆ. ನನಗಾಗಿ ಉಪವಾಸ ಮಾಡಿದ್ದಾರೆ. ಕೆಲವರು ಮೌನ ವ್ರತ ಮಾಡಿದ್ದಾರೆ. ಈ ಗ್ರಾಮಸ್ಥರ ಜನರೊಂದಿಗಿನ ನನ್ನ ಬಾಂಧವ್ಯ ಬೇರೂರಿದೆ. ಕಳೆದ 114 ವರ್ಷಗಳಿಂದಲೂ ಈ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರತಿಮೆ ನಿರ್ಮಾಣಕ್ಕೆ ಆಗ್ರಹಿಸಿದ್ದರು. 

ಕಪಾಲಿಬೆಟ್ಟ ಅಭಿವೃದ್ಧಿ ಟ್ರಸ್ಟ್'ಗೆ ಕುಮಾರಸ್ವಾಮಿ ಸರ್ಕಾರದ ಸಂಪುಟ ಅನುಮತಿ ನೀಡಿತ್ತು. 10 ಎಕರೆ ಜಾಗವನ್ನು ನೀಡಿದ್ದರು. ಡಿ.25ರಂದು ಟ್ರಸ್ಟ್'ನ ಸದಸ್ಯರನ್ನು ಭೇಟಿ ಮಾಡಿದ್ದೆ. ಈ ವೇಳೆ ರೂ.10 ಲಕ್ಷ ನೀಡಿದ್ದೆ. ಕೇವಲ ಒಂದು ಪ್ರತಿಮೆಗಷ್ಟೇ ಅಲ್ಲ, ನೂರಾರು ದೇಗುಗಳಿಗೂ ಹಣವನ್ನು ನೀಡಿದ್ದೇನೆ. ಯಶವಂತಪುರದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರೂ.40-50 ಕೋಟಿ ನೀಡಿದ್ದೇವೆ. ನನ್ನ ಜಾತ್ಯಾತೀತ ಬೆಳವಣಿಗೆ ಕಂಡು ಬಿಜೆಪಿಯವರಿಗೆ ಹೊಟ್ಟೆಯುರಿ. ಪ್ರಾರ್ಥನೆ ಮಾಡುವ ಹಕ್ಕು ಪ್ರತೀಯೊಬ್ಬರಿಗೂ ಇದೆ ಎಂದು ತಿಳಿಸಿದ್ದಾರೆ. 

ಸೋನಿಯಾ ಗಾಂಧಿ ಓಲೈಕೆಗಾಗಿ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ?
ಮಾತನಾಡುವುದಕ್ಕೂ ಮುನ್ನ ಬಿಜೆಪಿಯವರು ಆಲೋಚನೆ ಮಾಡಬೇಕು. ಈ ವಿಚಾರದಲ್ಲಿ ಸೋನಿಯಾ ಗಾಂಧಿಯವರನ್ನೇಕೆ ಎಳೆದು ತರಲಾಗಿದೆ? 2016-17ರಲ್ಲಿಯೇ ಹಾರೋಬೆಲೆಯ ಜನರಿಗೆ ಪ್ರತಿಮೆ ಸ್ಥಾಪನೆ ಕುರಿತು ಮಾತು ಕೊಟ್ಟಿದ್ದೆ. ಇದು ಕ್ರಿಶ್ಚಿಯನ್ನರ ಗ್ರಾಮ. ಮೊದಲು ಬಿಜೆಪಿಯವರು ಸಾಕ್ಷ್ಯಾಧಾರ ಸಂಗ್ರಹಿಸಲಿ. ಸೋನಿಯಾ ಗಾಂಧಿ ಹೆಸರು ತಂದು ಬಿಜೆಪಿಯವರು ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಕೋಮುವಾದ ಹುಟ್ಟುಹಾಕಲು ಬಿಜೆಪಿಯವರು ಇನ್ನೆಷ್ಟು ಸುಳ್ಳುಗಳನ್ನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆಯವರು ನಿಮ್ಮನ್ನು ಗುಲಾಮ ಎಂದು ಕರೆದಿದ್ದಾರೆ?
ಅವರಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ. ಅನಂತ್ ಕುಮಾರ್ ಒಬ್ಬ ನಿರುದ್ಯೋಗಿ. ನನ್ನನ್ನು ಗುಲಾಮನೆಂದೇ ಕರೆಯಲಿ ಬಿಡಿ. ಅದರಿಂದ ನನಗೇನು ಸಮಸ್ಯೆಯಿಲ್ಲ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನೇ ಸುಟ್ಟುಹಾಕಲು ಅನಂತ್ ಕುಮಾರ್ ಬಯಸಿದ್ದರು. ಅನಂತ್ ಕುಮಾರ್ ಭರವಸೆಯ ನಾಯಕ. ಚೆನ್ನಾಗಿರಲಿ ಎಂದು ಆಶಿಸುತ್ತೇನೆ. 

ಹಾರೋಬೆಲೆ ಗ್ರಾಮವೇ ಏಕೆ?
ಹಾರೋಬೆಲೆ ಗ್ರಾಮಸ್ಥರೊಂದಿಗೆ ನನ್ನ ಭಾವನಾತ್ಮಕ ಸಂಬಂಧವಿದೆ. ನನಗೆ ಅಗತ್ಯತೆ ಬಂದಾಗಲೆಲ್ಲಾ ಈ ಗ್ರಾಮಸ್ಥರು ನನಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ನನ್ನ ಕ್ಷೇತ್ರ. ಇಲ್ಲಿರುವ ಜನರು ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ. ವಿಚಾರವೇ ಅಲ್ಲದ ವಿಷಯಕ್ಕೆ ಬಿಜೆಪಿಯವರು ಹಾರಾಡುತ್ತಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com