ಗದ್ದಲದ ನಡುವೆಯೇ ಹಲವು ವಿಧೇಯಕಗಳಿಗೆ ಅಂಗೀಕಾರ, ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಹಣಕಾಸು ಮಸೂದೆ....
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಹಣಕಾಸು ಮಸೂದೆ ಸೇರಿದಂತೆ ಹಲವು ವಿಧೇಯಕಗಳಿಗೆ ಅಂಗೀಕಾರ ಪಡೆಯುವುದರೊಂದಿಗೆ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲೇ ತೆರೆ ಬಿದ್ದಿದೆ.
ಫೆಬ್ರವರಿ 6ರಂದು ರಾಜ್ಯಪಾಲ ವಜೂಭಾಯಿ ವಾಲಾ ಅವರ ಭಾಷಣದೊಂದಿಗೆ ಆರಂಭವಾಗಿದ್ದ ಬಜೆಟ್ ಅಧಿವೇಶನ ನಾಳೆ, ಅಂದರೆ ಫೆಬ್ರವರಿ 15ರವರೆಗೆ ನಡೆಯಬೇಕಿತ್ತು. ಆದರೆ ಅಧಿವೇಶನ ಆರಂಭವಾದಾಗಿನಿಂದ ಸುಗಮ ಕಲಾಪಕ್ಕೆ ಪ್ರತಿಪಕ್ಷ ಬಿಜೆಪಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಇಂದು ಬಿಜೆಪಿ ಸದಸ್ಯರ ಧರಣಿಯ ನಡುವೆಯೇ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಪ್ರಸ್ತಾವವನ್ನು ಅಂಗೀಕರಿಸಲಾಯಿತು. 
2019 - 2020ನೇ ಸಾಲಿನ 80168 ಕೋಟಿ ರೂ ಲೇಖಾನುದಾನ ಹಾಗೂ 14581 ಕೋಟಿ ರೂ ಪೂರಕ ಅಂದಾಜು ಧನ ವಿನಿಯೋಗ ಕುರಿತ ಹಣಕಾಸು ಮಸೂದೆಗಳಿಗೆ ಸದನ ಅಂಗೀಕರಿಸಿದೆ.
ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ಸದಸ್ಯರ ಧರಣಿ ಮತ್ತು ಪ್ರತಿಭಟನೆ ನಡುವೆಯೇ ಮಸೂದೆಗಳನ್ನು ಮಂಡಿಸಿದರು. ಸಭಾಧ್ಯಕ್ಷ ರಮೇಶ್ ಕುಮಾರ್ ಮಸೂದೆಗಳನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ 
ಮುಕ್ತಾಯವಾಯಿತು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳೆದ ಶುಕ್ರವಾರ 2.34 ಲಕ್ಷ ಕೋಟಿ ರೂ ಮೊತ್ತದ 2019 - 20 ನೇ ಸಾಲಿನ ಆಯವ್ಯಯ ಮಂಡಿಸಿದ್ದರು.
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ನಿವಾಸದ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿರುವ ಪ್ರಕರಣವನ್ನು ಮುಂದಿಟ್ಟುಕೊಂಡು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಧರಣಿ ನಡುವೆಯೇ ಮಸೂದೆಗಳಿಗೆ ಅನುಮೋದನೆ ದೊರೆಯಿತು.
ಇನ್ನು ವಿಧಾನಪರಿಷತ್ತಿನಲ್ಲೂ ಕೂಡ ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗಿರಲಿಲ್ಲ. ಒಟ್ಟಾರೆ ಏಳು ದಿನಗಳಲ್ಲಿ 10 ಗಂಟೆ 20 ನಿಮಿಷ ಮಾತ್ರ ನಡೆದ ಕಲಾಪದಲ್ಲಿ ಜನಸಾಮಾನ್ಯರ ಸಮಸ್ಯೆಗಳ ಧ್ವನಿ ಕೇಳಿ ಬರಲಿಲ್ಲ. ಹಲವಾರು ವಿಧೇಯಕಗಳು ಕೂಡ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರ ಪಡೆಯಿತು. 
  
ಕಾಂಗ್ರೆಸ್ ವಿರುದ್ಧ ಬಹಿರಂಗ ಬಂಡಾಯ ಸಾರಿ ಕೊನೇ ಕ್ಷಣದವರೆಗೂ ಪಕ್ಷದ ಶಾಸಕಾಂಗ ಸಭೆ ಹಾಗೂ ಅಧಿವೇಶನಕ್ಕೆ ಗೈರು ಹಾಜರಾಗಿದ್ದ ನಾಲ್ವರು ಶಾಸಕರು ನಿನ್ನೆ ದಿನ ಹಠಾತ್ ಪ್ರತ್ಯಕ್ಷರಾಗಿ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದ ಇಬ್ಬರು ಪಕ್ಷೇತರ ಶಾಸಕರು ಕೂಡ ನಿನ್ನೆಯಷ್ಟೇ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದರು. 
  
ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನವೇ ಸರ್ಕಾರ ಪತನವಾಗಲಿದೆ, ಬಜೆಟ್ ಮಂಡನೆ ಮಾಡುವ ಅವಕಾಶ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಿಗುವುದೇ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಹೇಳುತ್ತಾ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದ ಮೇಲೆ ರಾಜಕೀಯ ಬಿಕ್ಕಟ್ಟಿನ ಕಾರ್ಮೋಡ ಆವರಿಸಿತ್ತು. ಸರ್ಕಾರ ಗಟ್ಟಿಯಾಗಿ ಉಳಿಯಲಿದೆಯೋ ಇಲ್ಲ ಕಾಂಗ್ರೆಸ್ ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ ಪತನವಾಗಲಿದೆಯೋ ಎಂಬ ಭೀತಿಯೂ ಸಾರ್ವಜನಿಕ ವಲಯದಲ್ಲಿ ಆವರಿಸಿಕೊಂಡಿತ್ತು. ಎಲ್ಲವನ್ನೂ ಮೀರಿ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಿದ್ದು ಅದಕ್ಕೆ ಅಂಗೀಕಾರ ಪಡೆದುಕೊಂಡಿದ್ದರು. ಒಟ್ಟಾರೆ ಬಜೆಟ್ ಅಧಿವೇಶನ ಗೌಜು, ಗದ್ದಲ, ಕೋಲಾಹಲದಲ್ಲೇ ಕಳೆದು ಹೋಯಿತು. 
  
ಒಂದು ಫೋನ್ ಸಂಭಾಷಣೆಯ ಆಡಿಯೋ ಪ್ರಕರಣ  ಇಡೀ ಅಧಿವೇಶನವನ್ನೇ ದಿಕ್ಕು ತಪ್ಪಿಸಿತು. ನಿಗದಿಯಂತೆ ನಾಳೆಗೆ ಮುಗಿಯಬೇಕಾಗಿದ್ದ ವಿಧಾನಮಂಡಲದ ಬಜೆಟ್ ಅಧಿವೇಶನ ಒಂದು ದಿನ ಮುಂಚಿತವಾಗಿಯೇ ಮುಕ್ತಾಯಗೊಂಡಿದ್ದು ವಿಪರ್ಯಾಸ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com