ಹೆಚ್ ಡಿ ರೇವಣ್ಣ
ಹೆಚ್ ಡಿ ರೇವಣ್ಣ

ಶಾಸಕರಿಗೆ ಅನ್ಯಾಯವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಹೆಚ್.ಡಿ.ರೇವಣ್ಣ

ತಮ್ಮ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆ ಬಿಟ್ಟು ಇನ್ಯಾವುದೇ ಇಲಾಖೆಯಲ್ಲಿ ದೇವರಾಣೆಗೂ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ಶಾಸಕರಿಗೂ ಅನ್ಯಾಯ...
Published on
ಬೆಂಗಳೂರು: ತಮ್ಮ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆ ಬಿಟ್ಟು ಇನ್ಯಾವುದೇ ಇಲಾಖೆಯಲ್ಲಿ ದೇವರಾಣೆಗೂ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ಶಾಸಕರಿಗೂ ಅನ್ಯಾಯ ಮಾಡಿಲ್ಲ. ಒಂದುವೇಳೆ ತಮ್ಮಿಂದ ಅನ್ಯಾಯವಾಗಿದ್ದರೆ ಕ್ಷಮೆಯಾಚಿಸುವುದಾಗಿ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರು ಬುಧವಾರ ಬಹಿರಂಗವಾಗಿಯೇ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನು ತಮಗೆ ಕೊಟ್ಟಿದ್ದು, ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಈಗ ಮಂತ್ರಿ ಕೆಲಸವೇ ಸಾಕಾಗಿ ಹೋಗಿರುವಾಗ ಅತೃಪ್ತ ಶಾಸಕರನ್ನು ತಾವು ಮನವೊಲಿಸುವ ಪ್ರಯತ್ನ ಮಾಡುವುದು ಎಲ್ಲಿಂದ ಬಂತು. ಅವರನ್ನು ವಾಪಸು ಕರೆತರುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಟ್ಟಿದ್ದೇವೆ ಎಂದರು.
18 ವರ್ಷಗಳ ಕಾಲ ತಂದೆ ಹೆಚ್.ಡಿ.ದೇವೇಗೌಡ ಯಾವುದೇ ಅಧಿಕಾರವಿಲ್ಲದೇ ವಿರೋಧ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ನಾನು ಸಹ 10 ವರ್ಷ ಅಧಿಕಾರದಿಂದ ದೂರವೇ ಉಳಿದಿದ್ದೆ. ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ ಬಂದಿರುವ ಕುಟುಂಬ ತಮ್ಮದು. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಂಜಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಸಚಿವ ಎಂಟಿಬಿ ನಾಗರಾಜ್ ಅವರು ವಸತಿ  ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿರುವುದಾಗಿ ವಿನಾಕಾರಣ ತಮ್ಮ ಮೇಲೆ ಆರೋಪ ಮಾಡಿದ್ದಾರೆ. ತಾವು ವಸತಿ ಇಲಾಖೆಗೆ ಸೂಪರಿಂಡೆಂಟ್ ನೇಮಿಸಿದ್ದು, ಬಿಟ್ಟರೆ ಕಾರ್ಯದರ್ಶಿ ಹುದ್ದೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ವಸತಿ ಇಲಾಖೆಗೆ ಕಾರ್ಯದರ್ಶಿ ನೇಮಕ ಮಾಡಿದ್ದು ಕುಮಾರಸ್ವಾಮಿ ಹೊರತೇ ತಾವಲ್ಲ. ಬೆಂಗಳೂರಿನಲ್ಲಿದ್ದಾಗ ತಮ್ಮ ಬಗ್ಗೆ ಆರೋಪ ಮಾಡದ ಎಂಟಿಬಿ ಮುಂಬೈಗೆ ಹೋದ ಮೇಲೆ ದೂರುತ್ತಿದ್ದಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ನನ್ನಿಂದ ಯಾರಿಗೂ ನೋವಾಗಿಲ್ಲ. ನಮ್ಮ ಪಕ್ಷದ ನಾರಾಯಣಗೌಡ, ಹೆಚ್.ವಿಶ್ವನಾಥ್, ಗೋಪಾಲಯ್ಯ ಆಗಲೀ ಯಾರೂ ಸಹ ರೇವಣ್ಣ ಅವರಿಂದ ನೋವಾಗಿದೆ ಎಂದು ಹೇಳಿಲ್ಲ. ನನ್ನ ಹೆಸರನ್ನು ಉಲ್ಲೇಖಿಸಿಲ್ಲ. ನಮ್ಮದು ಕುಟುಂಬ ರಾಜಕಾರಣ ಎಂದು ಆರೋಪ ಮಾಡಿರುವ ನಾರಾಯಣಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ. ಯಾರ ಬಗ್ಗೆಯೂ ಮಾತನಾಡುವ ಸಂದರ್ಭ ಇದಲ್ಲ. ಸ್ವಲ್ಪ ದಿನಗಳ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದರು. 
ಕುಮಾರಸ್ವಾಮಿ ಅವರು ಬಿಜೆಪಿ ಅವರಿಗೆ ಬಹುಮತದ ವಿಚಾರದಲ್ಲಿ ತೊಂದರೆ ತೆಗೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಸ್ವಯಂಪ್ರೇರಣೆಯಿಂದ ಬಹುಮತ ಸಾಬೀತುಪಡಿಸಲು ಮುಂದಾಗಿದ್ದಾರೆ. ಆದರೆ ವಿಶ್ವಾಸಮತದ ಬಗ್ಗೆಯಾಗಲೀ, ಗುರುವಾರ ಸದನದಲ್ಲಿ ಏನಾಗಲಿದೆ ಎನ್ನುವುದಾಗಲಿ ತಮಗೆ ಗೊತ್ತಿಲ್ಲ ಎಂದು ಮುಗ್ಧರಂತೆ  ಪ್ರತಿಕ್ರಿಯಿಸಿದರು
ಸರ್ಕಾರ ಪತನಗೊಂಡರೆ ಕುಮಾರಸ್ವಾಮಿ ಅವರಿಗೆ ಏನೂ ನಷ್ಟವಾಗುವುದಿಲ್ಲ. ಮೈತ್ರಿ ಸರ್ಕಾರ ಉಳಿದರೆ ಜನರಿಗೆ ಸಹಾಯವಾಗುತ್ತದೆ. ಇಲ್ಲದಿದ್ದರೆ ತಮಗೇನೂ ನಷ್ಟವಿಲ್ಲ ಎಂದರು.
ಬಿಜೆಪಿ ಜೊತೆ ಜೆಡಿಎಸ್ ಸರ್ಕಾರ ರಚಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಕುಮಾರಸ್ವಾಮಿ ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ನನ್ನ ಮುಂದೆ ಉಪಮುಖ್ಯಮಂತ್ರಿ ಹುದ್ದೆಯ ಆಫರೂ ಇಲ್ಲ, ಸೈಕಲ್ಲೂ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ದೇವರ ಕೃಪೆಯಿದ್ದ ಕಾರಣಕ್ಕೆ ಸರ್ಕಾರ ರಚನೆಯಾಗಿತ್ತು. ಈಗ 118 ರಿಂದ 105 ಕ್ಕೆ ಬಲ ಕುಸಿದಿದೆ. ಒಂದು ವರ್ಷ ನಮ್ಮ ಕೈಯಲ್ಲಿ ಆಗಿದ್ದನ್ನು ಮಾಡಿದ್ದೇವೆ. ಕುಮಾರಸ್ವಾಮಿಯನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಹಗಲು ರಾತ್ರಿ ಜನರಿಗಾಗಿ ಕೆಲಸ ಮಾಡಿದ್ದಾನೆ. ನಾನಿನ್ನೂ ಶಾಸಕನಾಗಿಯೇ ಇರುತ್ತೇನೆ. ಇಲ್ಲಿಗೆ ಎಲ್ಲವೂ ಮುಗಿದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.
ತಿಪ್ಪೇಸ್ವಾಮಿ ಅವರು 1972 ರಿಂದಲೂ ನಮ್ಮ ಕುಟುಂಬಕ್ಕೆ ನಿಷ್ಠರಾಗಿದ್ದಾರೆ. ಅವರನ್ನು ಶಾಸಕರನ್ನಾಗಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆ ಎಂದು ರೇವಣ್ಣ ನೋವಿನಲ್ಲೂ ಸಮಾಧಾನದ ಮಾತುಗಳನ್ನಾಡಿದರು.
ಮೈತ್ರಿ ಸರ್ಕಾರದ ಈಗಿನ ಸ್ಥಿತಿಗೆ ಯಾರು ಕಾರಣ ಎಂಬ ಪ್ರಶ್ನೆಗೆ ರೇವಣ್ಣ ಮಾಧ್ಯಮದವರೇ ಈ ಬಗ್ಗೆ ಹೇಳಬೇಕು. ಯಾರಿದ್ದಾರೆ ಎನ್ನುವ ಬಗ್ಗೆ ಈಗ ಹೇಳುವುದಿಲ್ಲ. ರಾಷ್ಟ್ರ ತತ್ವದ ಬಗ್ಗೆ ಮಾತನಾಡುವವರೇ ಇದಕ್ಕೆಲ್ಲ ಕಾರಣ ಎಂದರು. 
ಈ ಸಂದರ್ಭದಲ್ಲಿ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ರೇವಣ್ಣ ಕಡ್ಡಿತುಂಡಾದಂತೆ ನುಡಿದರು.
ಕಳೆದ ಕೆಲವು ದಿನಗಳಿಂದ ಮಾಧ್ಯಮಗಳು ತಮಗೆ ಬಹಳ ಪ್ರಚಾರಕೊಡುತ್ತಿವೆ. ಪ್ರಚಾರಕ್ಕಾಗಿ ತಮ್ಮನ್ನು ಮೀಸಲಿಟ್ಟಿರುವುದಕ್ಕೆ ದುಃಖಪಡುವುದಿಲ್ಲ ಎಂದರು.
ಬಡಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದ ಪರಿಣಾಮ 1 ಸಾವಿರ ಆಂಗ್ಲ ಶಾಲೆಗಳ ಪ್ರಾರಂಭಕ್ಕೆ ನಾಂದಿಯಾಯಿತು. ಇದು 2 ಸಾವಿರವೂ ಆಗಬೇಕು ಎನ್ನುವ ಆಸೆಯಿದೆ ಎಂದರು.
 ಹಲವು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಲ್ಲಿ ನೆನಗುದಿಗೆ ಬಿದ್ದಿದ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ನಿರ್ವಹಿಸಿದ್ದೇನೆ. ಹಿಂದೆ ತಾವು ಲೋಕೋಪಯೋಗಿ ಸಚಿವನಾಗಿದ್ದಾಗ ಹೊರ ವರ್ತುಲ ರಸ್ತೆಗೆ 4 ಸಾವಿರ ಕೋಟಿ ರೂ.ಗೆ 4 ಟೆಂಡರ್ ಕರೆಯಲಾಗಿತ್ತು. ನಾನು ಅಧಿಕಾರ ಕಳೆದುಕೊಂಡ ಮೇಲೆ ಅದು ಹಾಗೆಯೇ ಉಳಿಯಿತು. ಈಗ ಅದು 17 ಸಾವಿರ ಕೋಟಿ ಆಗಿದೆ. ಹಿಂದಿನ ಸರ್ಕಾರ ಈ ಕಾಮಗಾರಿಯನ್ನು ಏಕೆ ಕೈಗೆತ್ತಿಕೊಳ್ಳಲಿಲ್ಲ ಎಂಬುದು ತಮಗೆ ಗೊತ್ತಿಲ್ಲ. ಹಿಂದೆಯೇ ಈ ಕಾಮಗಾರಿ ಆರಂಭಿಸಿದ್ದರೆ 4 ಸಾವಿರ ಕೋಟಿ ರೂ.ನಲ್ಲಿಯೇ ಕೆಲಸವಾಗುತ್ತಿತ್ತು. ಇದೀಗ ದುಬಾರಿಯಾಗಿದೆ ಎಂದರು.
2013ರ ಸಚಿವ ಸಂಪುಟದಲ್ಲಿ ಎಲಿವೆಟೆಡ್ ರಸ್ತೆ ನಿರ್ಮಾಣ ಕೆ.ಆರ್.ಡಿ.ಎಲ್ ಗೆ ಕೊಡಲಾಗಿತ್ತು. ಆದರೆ ನಾಲ್ಕು ವರ್ಷ ಸರ್ಕಾರ ಏನೂ ಮಾಡಿರಲಿಲ್ಲ. ನಾನು ಮತ್ತೆ ಬಂದ ಮೇಲೆ ಇದನ್ನು ಕೈಗೆತ್ತಿಕೊಂಡು ಕೆಲಸ ಮಾಡಿದ್ದೇನೆ ಎಂದರು. 
ಬೆಂಗಳೂರು ಶಾಸಕರಾದ ಮುನಿರತ್ನಂ ಹಾಗೂ ಬೈರತಿ ಸುರೇಶ್ ಉತ್ತರ-ದಕ್ಷಿಣ ರಸ್ತೆ‌ ಬಗ್ಗೆ ಪ್ರಸ್ತಾಪಿಸಿದಾಗ ಬೆಂಗಳೂರು ಅಭಿವೃದ್ಧಿಗೆ ಕೆಲಸ ಮಾಡಿ. ಬೆಂಗಳೂರು ರಸ್ತೆ ನಿಗಮಕ್ಕೆ ಬೈರತಿ ಸುರೇಶ್ ಅವರನ್ನೇ ಅಧ್ಯಕ್ಷರಾಗಿ ಎಂದಿದ್ದೆ. ಆದರೆ ಈಗ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು. 
ಬಿಜೆಪಿ ಶಾಸಕರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಂಡು ಲೋಕೋಪಯೋಗಿ ಇಲಾಖೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಯಾವುದೇ ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ತಮ್ಮ ಪಾತ್ರವಿಲ್ಲ. ಲೋಕೋಪಯೋಗಿ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಹುತೇಕ ಶಾಸಕರು ತಮ್ಮ ರಾಜೀನಾಮೆಗೆ ರೇವಣ್ಣ ಅವರ ಹಸ್ತಕ್ಷೇಪವೇ ಕಾರಣ ಎಂದು ದೂರಿದ್ದರು. ಸುದ್ದಿಗೋಷ್ಠಿ ಮೂಲಕ ತಮ್ಮ ಯಾವುದೇ ಪಾತ್ರವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರಾದರೂ ರೇವಣ್ಣ ಅವರ ಮಾತುಗಳಲ್ಲಿ ಸರ್ಕಾರ ಉಳಿಯುವ ಬಗ್ಗೆಯಾಗಲೀ ಉಳಿಸುವ ಬಗ್ಗೆಯಾಗಲೀ ಯಾವುದೇ ಸ್ಪಷ್ಟತೆ ಕಂಡುಬರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com