ಕರ್ನಾಟಕ ರಾಜಕೀಯ ಬಿಕ್ಕಟ್ಟು: 25 ವರ್ಷ ಹಿಂದಿನ ಐತಿಹಾಸಿಕ ಬೊಮ್ಮಾಯಿ ತೀರ್ಪಿನತ್ತ ಎಲ್ಲರ ಚಿತ್ತ!

ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ರಾಜ್ಯ ಸರ್ಕಾರಗಳನ್ನು ಮಣಿಸುವ ಹುನ್ನಾರವನ್ನು ತಡೆಗಟ್ಟುವ ಸಂವಿಧಾನದ ಪರಿಚ್ಛೇದ 356 ರ ದುರ್ಬಳಕೆ ವಿರುದ್ಧ ಸುಪ್ರೀಂ ಕೋರ್ಟ್‌‌‌‌‌ ...
ಎಸ್.ಆರ್ ಬೊಮ್ಮಾಯಿ ಮತ್ತು ಕುಮಾರಸ್ವಾಮಿ(ಸಂಗ್ರಹ ಚಿತ್ರ)
ಎಸ್.ಆರ್ ಬೊಮ್ಮಾಯಿ ಮತ್ತು ಕುಮಾರಸ್ವಾಮಿ(ಸಂಗ್ರಹ ಚಿತ್ರ)
Updated on
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಸಾಂವಿಧಾನಿಕ ಬಿಕ್ಕಟ್ಟು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಕೆರಳಿದೆ. ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿಗೆ ಆದೇಶ ನೀಡಿದ್ದಾರೆ. ಆದರೆ ವಿಶ್ವಾಸಮತ ಯಾಚನೆ ಸದ್ಯದಲ್ಲಿ ಸಾಧ್ಯವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಪ್ರಕರಣ ಸದ್ಯದ ಪರಿಸ್ಥಿತಿಗೆ ಹೋಲಿಕೆಯಾಗುತ್ತಿದೆತ
ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ರಾಜ್ಯ ಸರ್ಕಾರಗಳನ್ನು ಮಣಿಸುವ ಹುನ್ನಾರವನ್ನು ತಡೆಗಟ್ಟುವ ಸಂವಿಧಾನದ ಪರಿಚ್ಛೇದ 356 ರ ದುರ್ಬಳಕೆ ವಿರುದ್ಧ ಸುಪ್ರೀಂ ಕೋರ್ಟ್‌‌‌‌‌ ಪ್ರಕಟಿಸಿದ ಐತಿಹಾಸಿಕ ತೀರ್ಪು ಬೊಮ್ಮಾಯಿ ಅವರ ಹೆಸರನ್ನು ಶಾಶ್ವತವಾಗಿರಿಸುತ್ತದೆ. 1989 ರಲ್ಲಿ ಕೆಲವು ಶಾಸಕರು ಅಂದಿನ ರಾಜ್ಯಪಾಲರಿಗೆ ಬೊಮ್ಮಾಯಿ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಪತ್ರ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಸರ್ಕಾರ ವಜಾ ಪ್ರಕರಣ ವಿರುದ್ಧ ಸಂವಿಧಾನ ಪೀಠ 1994 ರಲ್ಲಿ ಪ್ರಕಟಿಸಿದ ಈ ಮಹತ್ವದ ತೀರ್ಪು ಹಲವು ಸರ್ಕಾರಗಳಿಗೆ ಮರು ಜೀವ ದೊರಕಿಸಿ ಕೊಟ್ಟಿದ್ದು, ಪ್ರಸ್ತುತ ಅಧಿಕಾರದಲ್ಲಿರುವ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬೊಮ್ಮಾಯಿ ಪ್ರಕರಣವನ್ನು ಮೆಲುಕು ಹಾಕಿದೆ.
ಏನಿದು ಬೊಮ್ಮಾಯಿ ಪ್ರಕರಣ?
ಕರ್ನಾಟಕದಲ್ಲಿ ಎಸ್​.ಆರ್​.ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ 1989ರ ಏಪ್ರಿಲ್ 20ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಏಪ್ರಿಲ್​ 27ರಂದು ವಿಧಾನಸಭೆ ಅಧಿವೇಶನ ಕರೆಯಲಾಗಿದ್ದು, ಅಂದು ಬಹುಮತ ಸಾಬೀತುಪಡಿಸುವುದಾಗಿ ತಿಳಿಸಿದ್ದರು. ಆದರೆ, ಇದರ ಮರುದಿನವೇ ಬೊಮ್ಮಾಯಿ ಅವರಿಗೆ ಭಾರೀ ಆಘಾತ ಕಾದಿತ್ತು. ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್​ ಅವರು ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದರು.ಇದೇ ವೇಳೆ ಕೇಂದ್ರದಲ್ಲಿ  ದಿವಂಗತ ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದರು.
ಇದನ್ನು ಪ್ರಶ್ನಿಸಿ ಬೊಮ್ಮಾಯಿ ಅವರು ಹೈಕೋರ್ಟ್​ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನ ಪ್ರಕಾರವೇ ಜಾರಿಗೊಳಿಸಲಾಗಿದೆ ಎಂದು ಏ.26ರಂದು ತೀರ್ಪು ನೀಡಿತ್ತು. ಮತ್ತೆ ಈ ತೀರ್ಪನ್ನು ಪ್ರಶ್ನಿಸಿ ಬೊಮ್ಮಾಯಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸುಪ್ರೀಂಕೋರ್ಟ್​ಸರ್ಕಾರವೊಂದು ಬಹುಮತ ಹೊಂದಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸಂವಿಧಾನದ ವೇದಿಕೆ ವಿಧಾನಸಭೆಯ ಅಧಿವೇಶನವೇ ಹೊರತು ರಾಜಭವನ ಅಲ್ಲ. ಸಂವಿಧಾನದ 356ನೇ ವಿಧಿ ರಾಷ್ಟ್ರಪತಿಗೆ ನೀಡಿರುವುದು ಷರತ್ತುಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ ಎಂಬ ಐತಿಹಾಸಿಕ ತೀರ್ಪನ್ನು ನೀಡಿತ್ತು.ಇದು ಬೊಮ್ಮಾಯ ಪ್ರಕರಣ ಎಂದೇ ಪ್ರಸಿದ್ದವಾಗಿದೆ.
ದಿನದ ಅಂತ್ಯದೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ನೀಡಿದ 2ನೇ ಗಡುವಿಗೂ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೆಡ್ಡು ಹೊಡೆದಿದ್ದಾರೆ. ರಾಜ್ಯಪಾಲರ ನಡೆಯ ವಿರುದ್ಧವೇ ಸಿಎಂ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಇತ್ತ ರಾಜ್ಯಪಾಲರೂ ಕೇಂದ್ರಕ್ಕೆ ವರದಿ ರವಾನಿಸಿದ್ದಾರೆ. ಹೀಗಾಗಿ ಸಾಂವಿಧಾನಿಕ ಬಿಕ್ಕಟ್ಟು ಮತ್ತು ಕಾನೂನು ಸಮರದತ್ತ ಪ್ರಕರಣ ತಿರುಗಿದೆ. ಹಾಗಾಗಿ, ರಾಜ್ಯಪಾಲರ ಮುಂದಿನ ನಡೆ, ಕೇಂದ್ರದ ನಿರ್ಧಾರ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಏನಾಗಲಿದೆ ಎಂಬ ಪ್ರಶ್ನೆಗಳು ಕುತೂಹಲ ಹುಟ್ಟಿಸಿವೆ. 
ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂಗೆ ಸ್ಪಷ್ಟ ಸೂಚನೆ ನೀಡಿದ್ದರು. ಆದರೆ, ಸದನದಲ್ಲಿ ಈಗಾಗಲೇ ಈ ಪ್ರಸ್ತಾವನೆ ಮೇಲೆ ಚರ್ಚೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಮಯಾವಕಾಶ ನೀಡುವಂತೆ ಸಿಎಂ ಪತ್ರ ಬರೆದ ಹಿನ್ನೆಲೆಯಲ್ಲಿ ರಾಜ್ಯಪಾಲರು 2ನೇ ಬಾರಿಗೆ ಗಡುವನ್ನು ದಿನಾಂತ್ಯದ ವರೆಗೆ ವಿಸ್ತರಣೆ ಮಾಡಿದರು. ಆದರೆ, ಈ ಗಡುವು ಪಾಲನೆಗೆ ಸಿಎಂ ಹಾಗೂ ಆಡಳಿತ ಪಕ್ಷದ ಕಡೆಯಿಂದ ಆಸಕ್ತಿ ವ್ಯಕ್ತವಾಗಲಿಲ್ಲ. ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರ ಗಡುವು ನೆನಪಿಸಿ ಮತ ವಿಭಜನೆ ಬೇಡಿಕೆ ಮಂಡಿಸಿದರೂ,ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ. 
ರಾಜ್ಯಪಾಲರು ಮೈತ್ರಿ ಸರ್ಕಾರವನ್ನು ವಜಾಗೊಳಿಸುವಂತೆ ಕೋರಿ ರಾಷ್ಟ್ರಪತಿಗೆ ಶಿಫಾರಸು ಮಾಡುವ ಅಧಿಕಾರವಿದೆ. ಒಂದು ವೇಳೆ ರಾಜ್ಯಪಾಲರು ಹಾಗೆ ಮನವಿ ಮಾಡಿದರೆ ರಾಷ್ಟ್ರಪತಿ ರಾಜ್ಯದ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವನ್ನು ವಜಾಗೊಳಿಸಿ, ರಾಜ್ಯದ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದು, ಇಲ್ಲವೇ ರಾಜ್ಯಪಾಲರ ಆಡಳಿತಕ್ಕೆ ಒಪ್ಪಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com