ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಸಿಎಂ ಕುಮಾರಸ್ವಾಮಿ ರೈತರ ಕ್ಷಮೆ ಕೇಳಲಿ: ಬಿಎಸ್ ಯಡಿಯೂರಪ್ಪ

ಯಾದಗಿರಿ ಜಿಲ್ಲೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಂದ ಸಾಲಮನ್ನಾ ಆಗಿರುವ ಹಣ ವಾಪಾಸ್ ಪಡೆದಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ...
Published on
ಬೆಂಗಳೂರು: ಯಾದಗಿರಿ ಜಿಲ್ಲೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಂದ ಸಾಲಮನ್ನಾ ಆಗಿರುವ ಹಣ ವಾಪಾಸ್ ಪಡೆದಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ, ಬಿ ಎಸ್ ಯಡಿಯೂರಪ್ಪ, ಈ ಗಂಭೀರ ಲೋಪಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರೈತರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಯಾದಗಿರಿಯಲ್ಲಿ ಚುನಾವಣೆಗೂ ಮುನ್ನ ಸಾವಿರಾರು ರೈತರ ಸಾಲಮನ್ನಾ ಮಾಡಿ ಬ್ಯಾಂಕ್ ಗಳಿಗೆ ಹಣ ಜಮಾವಣೆ ಮಾಡಲಾಗಿತ್ತು. ಆದರೆ ಚುನಾವಣೆ ಮುಗಿದ ಕೂಡಲೇ ಆ ಹಣ ವಾಪಸ್ ತಗೊಳ್ಳಲಾಗಿದೆ. ಇದು ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ. ಹಿಂದೆಂದೂ ಈ ರೀತಿ ನಡೆದಿಲ್ಲ. ರೈತರಿಗೆ ಮುಖ್ಯಮಂತ್ರಿ ದ್ರೋಹ ಬಗೆದಿದ್ದು, ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣ ಯಾಕೆ ವಾಪಸ್ ತೆಗೆದುಕೊಳ್ಳಬೇಕು. ಇಂತಹ ಗಂಭೀರ ಲೋಪ ಎಸಗಿರುವ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಇದೀಗ ರೈತರಿಗೆ ದ್ರೋಹ ಮಾಡಿರುವುದು ಸ್ಪಷ್ಟವಾಗಿದೆ. ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಬರ, ಸಾಲಮನ್ನಾ ಹಾಗೂ ಜಿಂದಾಲ್ ಗೆ ಭೂಮಿ ಮಾರಾಟ ವಿಚಾರಗಳನ್ನು ಮುಂದಿಟ್ಟುಕೊಂಡು ಇದೇ 14,15,16 ರಂದು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜಿಂದಾಲ್ ಭೂಮಿ ಮಾರಾಟ ಮಾಡುವ ತೀರ್ಮಾನ ಮಾಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ ಭೂಮಿ ಮಾರಾಟಕ್ಕೆ ನಮ್ಮ ವಿರೋಧವಿದೆ. ಈ ಮಾರಾಟ ಖಂಡಿಸಿ ಹೋರಾಟ ಮಾಡುತ್ತೇವೆ. ಆದರೆ ಜಿಂದಾಲ್ ಗೆ ಭೂಮಿಯನ್ನು ಗುತ್ತಿಗೆ ನೀಡುವ ಅವಧಿ ಮುಂದುವರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಭೂಮಿ ಮಾರಾಟ ಮಾಡಲು ನಮ್ಮ ಸಮ್ಮತಿಯಿಲ್ಲ. ಒಟ್ಟಾರೆ ಈ ಪ್ರಕರಣದಲ್ಲಿ ಸರ್ಕಾರ ಲಂಚಕ್ಕೆ ತಲೆಬಾಗದೆ, ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ಏನು ಮಾಡಬೇಕು ಮಾಡಲಿ. ಆದರೆ ಜಮೀನು ಮಾರಾಟಕ್ಕೆ ಮುಂದಾಗಬಾರದು ಎಂದರು.
ಇನ್ನು ಐಎಂಎ ಜ್ಯುವೆಲ್ಸ್ ಅಂಗಡಿ ಮಾಲೀಕರ ಎಸಗಿರುವ ದ್ರೋಹದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಐಎಂಎ ಮೂಲಕ‌ ಜನರಿಗೆ ವಂಚನೆ ಆಗಿರುವುದು ಸ್ಪಷ್ಟವಾಗಿದ್ದು, ಇದು ತೀರಾ ಅನ್ಯಾಯ, ಆತ ಬಂದು ಜನರಿಗೆ ಅವರ ಹಣ ವಾಪಸ್ ಕೊಡಲಿ. ಸಾಮಾನ್ಯ ಜನರಿಗೆ ದ್ರೋಹ‌ ಮಾಡುವ ಕೆಲಸ ಮಾಡಬಾರದು. ವಂಚನೆ ಹಿಂದೆ ರೋಷನ್ ಬೇಗ್ ಅಥವಾ ಮತ್ತೊಬ್ಬರು ಎಂದು ಹೆಸರು ಹೇಳಲು ‌ಬಯಸುವುದಿಲ್ಲ. ಯಾರ ಮೇಲೋ ಆರೋಪ ಮಾಡುವುದನ್ನು ಬಿಟ್ಟು ಸ್ವತಃ ಮಾಲೀಕರೇ ಬಂದು ಜನರಿಗೆ ಹಣ ಕೊಡಲಿ. ಆ ಮಾಲೀಕ‌ ಎಲ್ಲಿದ್ದಾನೆ ಎಂದು ಹುಡುಕುವ ಕೆಲಸ ಮೊದಲು ಆಗಲಿ ಎಂದು ಯಡಿಯೂರಪ್ಪ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com