ಎಂ.ಬಿ ಪಾಟೀಲ್ ಹೊರತುಪಡಿಸಿ ಉ-ಕರ್ನಾಟಕ ಭಾಗದ ಶಾಸಕರಿಗೂ ಮಹತ್ವದ ಖಾತೆಯಿಲ್ಲ: ಹೊರಟ್ಟಿ ಗರಂ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ಅಭಿವೃದ್ಧಿಯಲ್ಲಿ ಮಾತ್ರ ನಿರ್ಲಕ್ಷ್ಯಿಸದೇ ಅಧಿಕಾರ ಹಂಚಿಕೆಯಲ್ಲೂ ನಿರ್ಲಕ್ಷ್ಯ ವಹಿಸಿದೆ ಎಂದು ...
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
ಹುಬ್ಬಳ್ಳಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ಅಭಿವೃದ್ಧಿಯಲ್ಲಿ ಮಾತ್ರ ನಿರ್ಲಕ್ಷ್ಯಿಸದೇ ಅಧಿಕಾರ ಹಂಚಿಕೆಯಲ್ಲೂ ನಿರ್ಲಕ್ಷ್ಯ ವಹಿಸಿದೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ  ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಭಾಗಕ್ಕೆ ಪ್ರಾತಿನಿಧ್ಯ ಕೊಡುವ ಪದ್ಧತಿಯನ್ನು ಸಿಎಂ ಬಿಟ್ಟಿದ್ದಾರೆ. ಉತ್ತರ ಕರ್ನಾಟಕಕ್ಕೆ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುತ್ತೇನೆ ಎಂದು ಹೇಳಿದ್ದರು. 
ಆದರೆ ಇಲ್ಲಿಯವರೆಗೂ ಒಂದೇ ಒಂದು ಕಚೇರಿ ಬಂದಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಗುಡುಗಿದರು.
ನನ್ನನ್ನು ಮಂತ್ರಿ ಮಾಡಿಲ್ಲ, ನಿನ್ನನ್ನು ಮಂತ್ರಿ ಮಾಡಲಿಲ್ಲ ಎಂಬ ವಿಚಾರಕ್ಕೆ ಜಗಳ ನಡೆದಿದೆ. ಹೀಗಾಗಿ ಸಿಎಂ ಹಾಗೂ ಡಿಸಿಎಂ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು, ಕರ್ನಾಟಕ ಅಂದ್ರೆ ಕೇವಲ ಬೆಂಗಳೂರು ಹಾಗೂ ಮೈಸೂರು ಅಲ್ಲ. ಉತ್ತರ ಕರ್ನಾಟಕದ ಕಡೆಗೂ ಗಮನ ಹರಿಸಿ ಅಂತ ತಿಳಿಸಿದ್ದೇನೆ ಎಂದು ಹೇಳಿದರು.
ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಪರಿಹಾರವಲ್ಲ. ಪ್ರತ್ಯೇಕ ರಾಜ್ಯದ ಗೊಡವೆಯೇ ನಮಗೆ ಬೇಡ.ಉತ್ತರ ಕರ್ನಾಟಕದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ 90 ಶಾಸಕರು ಆಯ್ಕೆಯಾಗಿದ್ದಾರೆ, ಎಂ.ಬಿ ಪಾಟೀಲ್ ಹೊರತು ಪಡಿಸಿದರೇ  ಉತ್ತರ ಕರ್ನಾಟಕ ಭಾಗದ ಬೇರೆ ಯಾವ ಶಾಸಕರಿಗೂ ಮಹತ್ವದ ಖಾತೆ ನೀಡಿಲ್ಲ,  ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಗದಗ ಮತ್ತು ಧಾರವಾಡ ಹಾಗಾ ಗದಗ, ಕೊಪ್ಪಳ ಜಿಲ್ಲೆಯ ಪ್ರತಿನಿಧಿಯಿಲ್ಲ,  
ಉತ್ತರ ಕರ್ನಾಟಕ ಭಾಗದ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುವ ಸಿಎಂ, ಇಲ್ಲಿ ಅಷ್ಟೊಂದು ಪ್ರಮಾಣದಲ್ಲಿ ರೈತರು ಸಾಲ ಮಾಡುತ್ತಾರೆ. ಅವರ ಜೀವನ ಮಟ್ಟ ಇಲ್ಲಿ ಸುಧಾರಿಸಿಲ್ಲ, ಸಿಕ್ಕಾಪಟ್ಟೆ ಬಡತನದಲ್ಲಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಂಡು ವ್ಯವಸ್ಥೆ ಸರಿಪಡಿಸುವುದರತ್ತ ಗಮನಹರಿಸಬೇಕೆಂದರು. 
ನಾನು ಹಿರಿಯ ರಾಜಕಾರಣಿ ನಿಜ. ಆದರೆ ಸಚಿವ ಸ್ಥಾನದ ಆಕಾಂಕ್ಷಿಯಾಗಿಲ್ಲ. ಹಾಗಾಗಿ ನನಗೆ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ. ನಾನೆಂದಿಗೂ ಸಚಿವ ಸ್ಥಾನಕ್ಕೆ ಆಸೆಪಟ್ಟವನಲ್ಲ ಎಂದು ಹೊರಟ್ಟಿ ಹೇಳಿದರು. ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ ನಾನು ಶಿಕ್ಷ ಣ ಸಚಿವನಾಗಬೇಕು ಎಂಬುದು ಶಿಕ್ಷಕರ ಕನಸಾಗಿತ್ತು. ಆ ಆಸೆ ಈಡೇರಿದೆ. ಬಳಿಕ ನಾನು ಸಚಿವ ಸ್ಥಾನಕ್ಕೆ ತಲೆಕೆಡಿಸಿಕೊಂಡಿಲ್ಲ. ಅಧಿಕಾರಕ್ಕೆ ಅಂಟಿಕೊಂಡೇ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಸ್ಪಷ್ಟಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com