ಸರ್ಕಾರಕ್ಕೆ ಹೆಚ್ ಡಿ ಕುಮಾರಸ್ವಾಮಿ,ಪಕ್ಷಕ್ಕೆ ಹೆಚ್ ಕೆ ಕುಮಾರಸ್ವಾಮಿ - ಇದು ಗೌಡರ ತಂತ್ರ

ಶಾಸಕ ಹೆಚ್ ವಿಶ್ವನಾಥ್ ಅವರಿಂದ ತೆರವಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಸಮುದಾಯದ ಅಭ್ಯರ್ಥಿಯನ್ನು ಸಾರಥಿಯನ್ನಾಗಿ ಮಾಡಬಹುದಾಗಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಘೋಷಿಸುತ್ತಿದ್ದಂತೆಯೇ ಸಕಲೇಶಪುರ ಶಾಸಕ ಹೆಚ್ ಕೆ ಕುಮಾರಸ್ವಾಮಿ ಪಕ್ಷದ ನೊಗದ ಹೊರಲು ಸಜ್ಜಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಶಾಸಕ ಹೆಚ್ ವಿಶ್ವನಾಥ್ ಅವರಿಂದ ತೆರವಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಸಮುದಾಯದ ಅಭ್ಯರ್ಥಿಯನ್ನು ಸಾರಥಿಯನ್ನಾಗಿ ಮಾಡಬಹುದಾಗಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಘೋಷಿಸುತ್ತಿದ್ದಂತೆಯೇ ಸಕಲೇಶಪುರ ಶಾಸಕ ಹೆಚ್ ಕೆ ಕುಮಾರಸ್ವಾಮಿ ಪಕ್ಷದ ನೊಗದ ಹೊರಲು ಸಜ್ಜಾಗಿದ್ದಾರೆ.
ಮಿತ ಭಾಷಿ, ಪಕ್ಷದ ನಿಷ್ಠಾವಂತರ ಸಾಲಿನಲ್ಲಿ ಗುರುತಿಸಿಕೊಂಡಿರುವ ಸಕಲೇಶಪುರ ಶಾಸಕ ಹೆಚ್ ಕೆ ಕುಮಾರಸ್ವಾಮಿ ಅವರಿಗೆ ಪಕ್ಷದ ಧ್ವಜ ನೀಡಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತೀರ್ಮಾನಿಸಿದ್ದಾರೆ. ಈ ಬಗ್ಗೆ  ಮಾತನಾಡಿರುವ ಹೆಚ್ ಕೆ ಕುಮಾರಸ್ವಾಮಿ ತಮ್ಮನ್ನು ರಾಜ್ಯಾಧ್ಯರನ್ನಾಗಿ ನೇಮಿಸಲು ಪಕ್ಷದಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಅನಿವಾರ್ಯ ಸಂದರ್ಭದಲ್ಲಿ ತಮಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗುತ್ತಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ತಮಗೆ ಪಕ್ಷದ ಹೊಣೆ ಹೊರುವಂತೆ ದೇವೇಗೌಡರು ಒತ್ತಡ ಹೇರಿದ್ದಾರೆ. ಅವರ ಮಾತಿಗೆ ಒಪ್ಪಿಗೆ ಸೂಚಿದ್ದೇನೆ ಎಂದರು.
 ವಿಶ್ವನಾಥ್ ಹಿಂದುಳಿದ ವರ್ಗದವರಾಗಿದ್ದರು. ಈಗ ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸಾಧ್ಯವಿಲ್ಲ ಎಂದು ರಾಜೀನಾಮೆ ಕೊಟ್ಟಿದ್ದಾರೆ.ಈಗ ಪಕ್ಷದ ಉಸ್ತುವಾರಿಯನ್ನು ಪರಿಶಿಷ್ಟ ಸಮುದಾಯಕ್ಕೆ ನೀಡಲು ದೇವೇಗೌಡರು ಮುಂದಾಗಿದ್ದಾರೆ ಎಂದರು.
ಪಕ್ಷದಲ್ಲಿ ರಾಜ್ಯಾಧ್ಯಕ್ಷರಾದವರಿಗೆ ಗೌಡರ ಕುಟುಂಬದ ಹಸ್ತಕ್ಷೇಪದಿಂದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ.ನೆಪಮಾತ್ರಕ್ಕೆ ಮಾತ್ರ ಅಧ್ಯಕ್ಷ ಸ್ಥಾನ ಎಂಬ ಕಾರಣ ನೀಡಿ ವಿಶ್ವನಾಥ್ ಅವರು ಪಕ್ಷದ ಸಾರಥ್ಯಕ್ಕೆ ರಾಜೀನಾಮೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ ಕೆ ಕುಮಾರಸ್ವಾಮಿ, ತಮ್ಮಗಿನ್ನೂ ಆ ರೀತಿಯ ಯಾವುದೇ ಅನುಭವವಾಗಿಲ್ಲ .ಮಧ್ಯಂತರ ಚುನಾವಣೆ ಸಂದರ್ಭ ಎದುರಾಗಬಹುದು. ಇಂತಹ ಅನೀವಾರ್ಯ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷದಲ್ಲಿ ಸಂಘಟನೆ ಅನಿವಾರ್ಯ. ಹೀಗಾಗಿ ರಾಜ್ಯಾಧ್ಯಕ್ಷರ ನೇಮಕ ಮಾಡುತ್ತಿರಬಹುದು ಎಂದು ಹೇಳಿದರು.
ಇನ್ನು ಜುಲೈ 11  ಅಥವಾ 12 ರಂದು ನಗರದ ಅರಮನೆ ಮೈದಾನದಲ್ಲಿ ಪರಿಶಿಷ್ಟ ಸಮಾವೇಶ ನಡೆಸಿ , ಸಮಾವೇಶದಲ್ಲಿ ಹೊಸ ರಾಜ್ಯಾಧ್ಯಕ್ಷರ ಹೆಸರನ್ನು ಪ್ರಕಟಿಸುವುದಾಗಿ ದೇವೇಗೌಡರು ಹೇಳಿದ್ದಾರೆ. 
ಜೆಡಿಎಸ್ ನಲ್ಲಿ ಇದೀಗ ಕುಮಾರಸ್ವಾಮಿ ಹೆಸರಿಗೆ ಅತಿ ಹೆಚ್ಚಿನ ಮನ್ನಣೆ ದೊರೆತಿದ್ದು, ಈ ಹೆಸರಿನ ಒಬ್ಬರು ಮುಖ್ಯಮಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದರೆ ಮತ್ತೊಬ್ಬರು ಪಕ್ಷವನ್ನು ಮುನ್ನಡೆಸಲು ಸಜ್ಜಾಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com