ಒಕ್ಕಲಿಗನಲ್ಲದೇ ಬೇರೆ ಜಾತಿಗೆ ಸೇರಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು: ಶಿವಲಿಂಗೇಗೌಡ

ಸಮ್ಮಿಶ್ರ ಸರ್ಕಾರದಲ್ಲಿ ಅತಂತ್ರ ಸ್ಥಿತಿಯಿದೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ಸಿಗುವುದು ಕಷ್ಟ. ಒಕ್ಕಲಿಗನಲ್ಲದೇ ಬೇರೆ ಜಾತಿಯವನಾಗಿದ್ದರೆ ತಮಗೂ ಸಚಿವ....
ಶಿವಲಿಂಗೇಗೌಡ
ಶಿವಲಿಂಗೇಗೌಡ
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಅತಂತ್ರ ಸ್ಥಿತಿಯಿದೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ಸಿಗುವುದು ಕಷ್ಟ. ಒಕ್ಕಲಿಗನಲ್ಲದೇ ಬೇರೆ ಜಾತಿಯವನಾಗಿದ್ದರೆ ತಮಗೂ ಸಚಿವ ಸ್ಥಾನ ದೊರೆಯುತ್ತಿತ್ತು ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ನೂತನ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಹೇಳಿದ್ದಾರೆ.
ಇಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಿಂದ ಈಗಾಗಲೇ ರೇವಣ್ಣ ಸಚಿವರಾಗಿದ್ದಾರೆ. ಹಾಸನಕ್ಕೆ ರೇವಣ್ಣ ಇದ್ದಮೇಲೆ ಬೇರೆಯವರು ಸಚಿವರಾಗುವುದು ಸರಿಯಲ್ಲ. ಅಲ್ಲದೇ ಒಕ್ಕಲಿಗರಲ್ಲಿ ಹಲವರು ಈಗಾಗಲೇ ಸಂಪುಟದಲ್ಲಿ ಸಚಿವರಾಗಿದ್ದಾರೆ. ತಾವು ಒಕ್ಕಲಿಗನಾಗಿರದೇ ಇದ್ದಿದ್ದರೆ ಮಂತ್ರಿ ಸ್ಥಾನ ಸಿಗುತ್ತಿತ್ತು ಎಂದು ಮಾರ್ಮಿಕವಾಗಿ ನುಡಿದರು.
ತಮಗೆ ಸಚಿವನಾಗುವ ಬಯಕೆ ಇತ್ತಾದರೂ ಮೈತ್ರಿ ಸರ್ಕಾರದಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ಗೃಹ ಮಂಡಳಿ ಅಧ್ಯಕ್ಷನಾಗಿ ಸಚಿವರಿಗಿಂತಲೂ ಉತ್ತಮವಾಗಿ ಕೆಲಸ ಮಾಡಬಹುದು. ವಸತಿ ಸಚಿವ ಎಂ.ಟಿ.ಬಿ‌.ನಾಗರಾಜ್ ಅವರಿಗೆ ಅಧಿಕಾರ ಸ್ವೀಕಾರ ಬಗ್ಗೆ ಮಾಹಿತಿ ನೀಡಿದ್ದೆ. ಎಂಟಿಬಿ ಹಾಗೂ ತಮ್ಮ ಅಥವಾ ಮೈತ್ರಿ ಸರ್ಕಾರದ ಯಾವುದೇ ನಾಯಕರ ನಡುವೆಯಾಗಲಿ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾಸನ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಥವಾ ಪ್ರಜ್ವಲ್ ರೇವಣ್ಣ ಇಬ್ಬರಲ್ಲಿ ಯಾರು ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ತಾವು ಮಾತನಾಡಲು ಇಷ್ಟಪಡುವುದಿಲ್ಲ. ದೊಡ್ಡವರು ಯಾರ ಪರ ಕೆಲಸ ಮಾಡು ಎಂದು ಹೇಳುತ್ತಾರೋ ಅಂತಹವರ ಪರ ಪ್ರಚಾರ ಮಾಡುತ್ತೇನೆ ಎಂದರು.
ಕರ್ನಾಟಕ ಗೃಹ ಮಂಡಳಿಗೆ ದೊಡ್ಡ ಇತಿಹಾಸವಿದ್ದು, ಸೂರಿಲ್ಲದವರಿಗೆ ನೆರಳು ನೀಡುವ ಉತ್ತಮ ಸಂಸ್ಥೆ ಇದಾಗಿದೆ. ಕಾ‌ನೂನಿನ ಚೌಕಟ್ಟಿನೊಳಗೆ ನಿವೇಶನ ಹಂಚಿಕೆ, ವಸತಿ ಸಂಕೀರ್ಣ ನಿರ್ಮಾಣಕ್ಕೆ ಗಮನಹರಿಸಲಾಗುವುದು. ಮಂಡಳಿಯಲ್ಲಿ ಒಳ್ಳೆಯ ಕೆಲಸ ಮಾಡುವ ಅಭಿಲಾಷೆ ಇದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. 
ಮೂಲಭೂತ ಸೌಲಭ್ಯ ಒದಗಿಸದೇ ನಿವೇಶನ ಹಂಚಿಕೆ ಮಾಡಬಾರದು. ಮೊದಲು ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಬೇಕು. ಮಂಡಳಿಯ ಕಾರ್ಯನಿರ್ವಹಣೆಗೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸುವುದಾಗಿ ಶಿವಲಿಂಗೇಗೌಡ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com