ನನಗೆ 86 ವರ್ಷ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡ

ನನಗೆ ಈಗ 86 ವರ್ಷ ವಯಸ್ಸಾಗಿದೆ. ಇನ್ನು 3 ತಿಂಗಳು ಕಳೆದರೆ 87 ವರ್ಷವಾಗುತ್ತೆ. ಈ ಇಳಿ ವಯಸ್ಸಿನಲ್ಲಿ ಚುನಾವಣೆ ಸ್ಪರ್ಧಿಸುವ ಬಗ್ಗೆ....
ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ
ಬೆಂಗಳೂರು: ನನಗೆ ಈಗ 86 ವರ್ಷ ವಯಸ್ಸಾಗಿದೆ. ಇನ್ನು 3 ತಿಂಗಳು ಕಳೆದರೆ 87 ವರ್ಷವಾಗುತ್ತೆ. ಈ ಇಳಿ ವಯಸ್ಸಿನಲ್ಲಿ ಚುನಾವಣೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಕಾಂಗ್ರೆಸ್ - ಜೆಡಿಎಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಮೂರು ವರ್ಷಗಳ ಹಿಂದೆಯೇ ನಾನು ಪ್ರಜ್ವಲ್ ಗೆ ಹಾಸನ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದೆ. ಅದರಂತೆ ಈ ವರ್ಷ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ ಎಂದರು.
ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ಇನ್ನು ನಿರ್ಧಾರ ಮಾಡಿಲ್ಲ. ಆದರೆ ಕೆಲ ಸ್ನೇಹಿತರು ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿದ್ದಾರೆ. ದೆಹಲಿಯಲ್ಲಿ ನನ್ನ ಅಗತ್ಯ ಎಷ್ಟಿದೆ ಎಂಬುದು ಗೊತ್ತಿಲ್ಲ ಎಂದರು.
ಮಾರ್ಚ್ 31ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಜಂಟಿ ಸಮಾವೇಶ ನಡೆಸುತ್ತೇವೆ. ಉಭಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಬರದಂತೆ ಕ್ರಮಕೈಗೊಳ್ಳುತ್ತೇವೆ. ಎಲ್ಲ ವಿಚಾರಗಳಲ್ಲಿ ನಾವು ವಿಸ್ತೃತ ಚರ್ಚೆ ಮಾಡಿದ್ದೇವೆ. ನಮಗೆ ಬಹಳ ಕಡಿಮೆ ಸಮಯವಿದೆ.  ಯಾವ ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯವಿದೆ ಅದನ್ನೆಲ್ಲ ಸರಿ ಮಾಡುವ ತೀರ್ಮಾನಕ್ಕೂ ಬಂದಿದ್ದೇವೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಶಿವಮೊಗ್ಗ ದಾವಣಗೆರೆ ಬಿಟ್ಟು ಉಳಿದ ಭಾಗದಲ್ಲಿ‌ ಮೊದಲ. ಹಂತದಲ್ಲಿ ಚುನಾವಣೆ ಇದೆ. ‌ಯಾವುದೇ ಕ್ಷೇತ್ರದಲ್ಲಿ ಬಿಕ್ಕಟ್ಟಿದ್ದರೆ ನಾನು ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್​, ದಿನೇಶ್​ ಗುಂಡೂರಾವ್, ಸಿಎಂ , ಖಂಡ್ರೆ ಎಲ್ಲರೂ ಇದ್ದೀವಿ ಪರಿಹಾರ ಮಾಡುತ್ತೇವೆ ಎಂದು ದೇವೇಗೌಡರು ತಿಳಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡ ಅವರು, ಮೋದಿ ಮಹಾಘಟಬಂಧನ್ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಆದರೆ ಅವರೇ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿದ್ದಾರೆ. ಇದನ್ನು ಮೋದಿ ಮರೆಯಬಾರದು ಎಂದರು. ಅಲ್ಲದೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ಮೋದಿಗೆ ಉತ್ತರ ನೀಡುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com