ಆಡಳಿತದತ್ತ ಕುಮಾರಸ್ವಾಮಿ ಚಿತ್ತ: ಮೇ 9 ರಂದು ಸಚಿವ ಸಂಪುಟ ಸಭೆ

ಲೋಕಸಭಾ ಚುನಾವಣಾ ಭರಾಟೆ ಮುಗಿದ ಬಳಿಕ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದತ್ತ ಗಮನ ಹರಿಸಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಲೋಕಸಭಾ ಚುನಾವಣಾ ಭರಾಟೆ ಮುಗಿದ ಬಳಿಕ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದತ್ತ ಗಮನ ಹರಿಸಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಕೃತಿ ಚಿಕಿತ್ಸೆ, ಪೂಜೆ ಹವನ- ಹೋಮ , ಕಂಟಕ ನಿವಾರಣೆ ಬಳಿಕ ಆಡಳಿತಕ್ಕೆ ಗಮನ ನೀಡಲು ಮುಂದಾಗಿದ್ದಾರೆ.
ಮಾರ್ಚ್ ತಿಂಗಳಲ್ಲಿ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದಾಗಿ ಸರ್ಕಾರ ಹಾಗೂ ಮಂತ್ರಿಗಳ ಗಮನ ಸಂಪೂರ್ಣವಾಗಿ ಚುನಾವಣೆಯತ್ತ ಕೇಂದ್ರೀಕರಿಸಿದ್ದರು. ಈಗ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದ ಹಿನ್ನಲೆಯಲ್ಲಿ ಸರ್ಕಾರ ಮತ್ತೆ ಚುರುಕುಗೊಂಡಿದೆ.
ಮೇ 9ರಂದು ಸಚಿವ ಸಂಪುಟ ಸಭೆ ಕರೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದಲ್ಲಿನ ಬರ, ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ಮೇವು, ಸೇರಿದಂತೆ ಬರ ಪರಿಸ್ಥಿತಿಯ ಅವಲೋಕನಕ್ಕೆ ಮುಂದಾಗಿದ್ದಾರೆ.
ಅಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬರ ಪರಿಹಾರಕ್ಕೆ ಸರ್ಕಾರ ಕೈಗೊಂಡಿರುವ ಕಾಮಗಾರಿಗಳು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ, ಸಾಲಮನ್ನಾ ಮತ್ತಿತರ ವಿಷಯಗಳು ಚರ್ಚೆಗೆ ಬರಲಿವೆ ಎನ್ನಲಾಗಿದೆ.
ನೂತನ ಯೋಜನೆಗಳನ್ನು ಘೋಷಿಸದೆ ಮುಂದುವರಿದ ಕಾಮಗಾರಿಗಳು, ಸದ್ಯದ ಪರಿಸ್ಥಿತಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಇತ್ತೀಚಿಗೆ ಹೈಕೋರ್ಟ್ ನೀಡಿದ ಹಲವಾರು ನಿರ್ದೇಶಗಳು, ಎಸ್ಸಿಎಸ್ಟಿ ಮುಂಬಡ್ತಿ ವಿವಾದ, ಶೈಕ್ಷಣಿಕ ಪ್ರವೇಶಾತಿ ಆರಂಭ, ಶಾಲಾ ಕಾಲೇಜುಗಳ ಮೂಲಸೌಕರ್ಯ, ಪಠ್ಯ ಪುಸ್ತಕಗಳು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವತ್ತ ಸರ್ಕಾರ ಚಿತ್ತ ಹರಿಸಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com