ಡಿ.ಕೆ.ಶಿವಕುಮಾರ್ ಗೆ ಜಾಮೀನು: ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಗೆ ದೆಹಲಿ ಉಚ್ಚನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದು ಕಾಂಗ್ರೆಸ್ ಪಾಳಯದಲ್ಲಿ....
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಗೆ ದೆಹಲಿ ಉಚ್ಚನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
  
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಶಿವಕುಮಾರ್ ಅವರಿಗೆ ಜಾಮೀನು ದೊರೆತಿರುವುದು ಸಂತಸದ ವಿಚಾರ. ಎಲ್ಲ ಷಡ್ಯಂತರಕ್ಕೆ ಉತ್ತರ ಸಿಕ್ಕಿದೆ. ಡಿಕೆಶಿ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಉಚ್ಚನ್ಯಾಯಾಲಯವೇ ಶಿವಕುಮಾರ್ ಅವರು ಯಾವುದೇ ರೀತಿಯ ಸಾಕ್ಷಿ ನಾಶ ಮಾಡುತ್ತಿಲ್ಲ ಎಂದು ಹೇಳಿದೆ. ನ್ಯಾಯಾಲಯದ ತೀರ್ಪು ಬಿಜೆಪಿ ಯವರಿಗೆ ಉತ್ತರ ನೀಡಿದೆ. ಮೋದಿ, ಅಮಿತ್ ಶಾ ಪ್ರಯತ್ನಗಳು ವಿಫಲವಾಗಿದೆ ಎಂದರು.
  
ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಷಡ್ಯಂತರ ರೂಪಿಸಲಾಗಿತ್ತು. ಬಿಜೆಪಿಯ ಫ್ಯಾಸಿಸ್ಟ್ ಸರ್ಕಾರದಲ್ಲಿ  ಯಾರನ್ನು ಬೇಕಾದರು ಎದುರಿಸಬಹುದು ಎಂದುಕೊಂಡಿದ್ದಾರೆ. ಕಾಂಗ್ರೆಸಿಗರನ್ನು ಷಡ್ಯಂತ್ರದ ಮೂಲಕ ಆರೋಪಿಗಳನ್ನಾಗಿಸಿ ಅಪರಾಧಕ್ಕೆ ಗುರಿಮಾಡುವ ಮೂಲಕ ಧ್ವನಿ ಅಡಗಿಸಲಾಗದು ಎಂದರು.
  
ಶಿವಕುಮಾರ್ ಗೆ ಜಾಮೀನು ದೊರೆತಿರುವುದು ಉಪಚುನಾವಣೆಗೆ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. ಶಿವಕುಮಾರ್ ಪಕ್ಷದ ದೊಡ್ಡ ನಾಯಕರು. ಉಪಚುನಾವಣೆಯಲ್ಲಿ ಶಿವಕುಮಾರ್, ಸಿದ್ದರಾಮಯ್ಯ, ಎಲ್ಲರು ಸೇರಿ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಗುಂಡೂರಾವ್ ಹೇಳಿದರು. 
  
ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮಾತನಾಡಿ, ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿರುವುದು ನಿಜಕ್ಕೂ ಸಂತಸದ ವಿಚಾರ. ಅವರ ಬಂಧನ ರಾಜಕೀಯದ ಮೋಸದಾಟ. ಶಿವಕುಮಾರ್ ಅವರಿಗೆ ಕೆಳಹಂತದ ನ್ಯಾಯಾಲಯದಲ್ಲಿಯೇ ಜಾಮೀನು ಸಿಗಬೇಕಿತ್ತು ಎಂಬುದು ವಕೀಲರಾಗಿ ತಮ್ಮ ಅಭಿಪ್ರಾಯ ಎಂದರು. ಪ್ರಕರಣದಲ್ಲಿ ಎಲ್ಲವನ್ನು ಮುಟ್ಟುಗೋಲು ಹಾಕಿಕೊಂಡು, ಪರಿಶೀಲನೆ ಮುಗಿದ ಮೇಲೆ ಜಾಮೀನು ನೀಡಬೇಕು. ಶಿವಕುಮಾರ್ ಗೆ ಕೊನೆಗೂ ನ್ಯಾಯ ಸಿಕ್ಕಿದೆ. ಅವರು ಕಾಂಗ್ರೆಸ್ ನಲ್ಲಿ ಮುಂಚೂಣಿ ನಾಯಕರು. ಅವರ ಬಿಡುಗಡೆ ಪಕ್ಷಕ್ಕೆ ಬಲ ತಂದಿದೆ ಎಂದು ನುಡಿದರು. 
  
ನ್ಯಾಯಾಲಯದ ತೀರ್ಪುನ್ನು ಸ್ವಾಗತಿಸುವುದಾಗಿ ಮೇಲ್ಮನೆ ಸದಸ್ಯ ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಶಿವಕುಮಾರ್ ಅವರದ್ದು ಭ್ರಷ್ಟಾಚಾರದ ಪ್ರಕರಣ ಆಗಿರಲಿಲ್ಲ. ಅದೊಂದು ರಾಜಕೀಯದ ಮೋಸದಾಟ. ಇಂದು ಎಲ್ಲರ ಕಣ್ಣಿಗೂ ಸತ್ಯ ಏನು ಎಂಬುದು ಕಾಣುತ್ತಿದೆ. ಅವರ ಬಿಡುಗಡೆಯಿಂದ ಕಾಂಗ್ರೆಸ್ ಪಕ್ಷದ ಬಲ ಇನ್ನೂ ಹೆಚ್ಚಾಗಲಿದೆ ಎಂದರು. 
  
ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಶಿವಕುಮಾರ್ ಅವರಿಗೆ ನೀಡಿರುವ ಜಾಮೀನು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. 
  
ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ದೆಹಲಿ ಉಚ್ಚ ನ್ಯಾಯಾಲಯ ಜಾಮೀನು ನೀಡಿರುವುದು ಸಂತಸದ ವಿಚಾರ ಎಂದಿದ್ದಾರೆ. ಕಳೆದ ಸೋಮವಾರ ತಿಹಾರ್ ಜೈಲಿನಲ್ಲಿ ಅವರನ್ನು ಭೇಟಿಯಾದಾಗ ಅವರಿಗೆ ಧೈರ್ಯ ತುಂಬಿ ಜಾಮೀನು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com