ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಮೈತ್ರಿ ಶಾಸಕರ ಖರೀದಿಗೆ ಬಳಸಿದ್ದ ಹಣ ಯಾರದ್ದು ? ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಮಲ್ಲೇಶ‍್ವರಂ ಬಿಬಿಎಂಪಿ ಕರ್ಮಕಾಂಡ ಮುಚ್ಚಿಹಾಕಲು ಕಡತದ ಕಚೇರಿಗೆ ಬೆಂಕಿ ಇಟ್ಟು ಭ‍್ರಷ್ಟಾಚಾರದ ರೂವಾರಿ ಎನಿಸಿಕೊಂಡಿದ್ದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಇದೀಗ ನವಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿರುವುದಕ್ಕೆ....

ಬೆಂಗಳೂರು: ಮಲ್ಲೇಶ‍್ವರಂ ಬಿಬಿಎಂಪಿ ಕರ್ಮಕಾಂಡ ಮುಚ್ಚಿಹಾಕಲು ಕಡತದ ಕಚೇರಿಗೆ ಬೆಂಕಿ ಇಟ್ಟು ಭ‍್ರಷ್ಟಾಚಾರದ ರೂವಾರಿ ಎನಿಸಿಕೊಂಡಿದ್ದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಇದೀಗ ನವಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇಂದು ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ನಿಜಕ್ಕೂ ಮರ್ಯಾದೆ ಎನ್ನುವುದು ಇದ್ದಿದ್ದೇ ಆದಲ್ಲಿ ಅವರು ಯಾರ ಬಳಿ ಹಣ ತಂದು ಶಾಸಕರ ಖರೀದಿ ಯತ್ನ ಮಾಡಲಾಗಿತ್ತು ಎಂಬ ಸತ್ಯ ಸಂಗತಿಯನ್ನು ಜನರ ಮುಂದೆ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಶಾಸಕರ ಖರೀದಿಗೆ ಬಳಸಿದ ಹಣ ಬ್ಲ್ಯಾಕ್ ಮನಿಯೋ, ವೈಟ್ ಮನಿಯೋ ಎಂಬುದನ್ನು ಸಹ ಅವರು ಬಹಿರಂಗಪಡಿಸಬೇಕು. ಶಾಸಕರ ಖರೀದಿಗೆ ಅಕ್ರಮ ಹಣ ಬಳಸಿದ್ದು ಸಾಬೀತಾಗಿದ್ದರೂ ಸಹ ಆದಾಯ ತೆರಿಗೆ ಇಲಾಖೆ ಬಿಜೆಪಿ ನಾಯಕರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ. ಇದೆಲ್ಲ ನೋಡಿದರೆ ಕೇಂದ್ರ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿದೆ ಎಂದರು.

ಸರ್ಕಾರವನ್ನು ಭದ್ರಗೊಳಿಸಲು ಬಿಜೆಪಿಯಿಂದ ಈಗಲೂ ಸಹ 15 ರಿಂದ 20 ಶಾಸಕರ ಖರೀದಿ ಯತ್ನ ಮುಂದುವರೆದಿದ್ದು, ಶಾಸಕರಿಗೆ ನಿಗಮ ಮಂಡಳಿ ಸ್ಥಾನದ ಆಮಿಷವೊಡ್ಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

2008ರಿಂದ ರಾಜಾರೋಷವಾಗಿ ಬಿಜೆಪಿ ನಾಯಕರು ಸರ್ಕಾರ ರಚನೆ, ಸರ್ಕಾರ ಭದ್ರ ಮಾಡಿಕೊಳ್ಳಲು ಅಕ್ರಮ ಹಣದ ವ್ಯವಹಾರವನ್ನು ಅವ್ಯಹತವಾಗಿ ಮುಂದುವರೆಸಿದ್ದಾರೆ. ಮೈತ್ರಿ ಸರ್ಕಾರ ಪತನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶರಣಗೌಡರಿಗೆ ಆಮಿಷ ಒಡ್ಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇಡಿ, ಐಟಿ ಇಲಾಖೆ ಎಲ್ಲಿ ಹೋಗಿದೆ? ಏಕೆ ಅವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ ಎಂದು ಚಾಟಿ ಬೀಸಿದರು.

ಅಕ್ರಮ ಆಸ್ತಿ ಸಂಪಾದಿಸಿದ್ದರೆ ಆದಾಯ ತೆರಿಗೆ ನಿಯಮದ ಪ್ರಕಾರ ಪ್ರಕರಣ ದಾಖಲಿಸಲಿ, ದಂಡವಿಧಿಸಿಲಿ, ಇಲಾಖೆಗಳ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ನೋಡಿದರೆ ರಾಜಕೀಯ ಸೇಡು ಸ್ಪಷ್ಟವಾಗುತ್ತದೆ ಎಂದರು.

ಬಿಜೆಪಿ ವಿರುದ್ಧವಾಗಿ ನಡೆದುಕೊಳ್ಳುವ ರಾಜಕೀಯ ನಾಯಕರಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲಿಯೂ ಹಿಂಸೆ ಮಾಡುತ್ತಿದೆ. ಶಿವಕುಮಾರ್ ಅವರನ್ನು ಮಂಗಳವಾರ ವಿಚಾರಣೆ ನಡೆಸಿದ ಬಳಿಕ 15 ನಿಮಿಷದೊಳಗೆ ಬಿಡುತ್ತೇನೆ ಎಂದು ಹೇಳಿದ್ದರು. ಬಳಿಕ ಯಾರದ್ದೋ ಸೂಚನೆಯ ಮೇರೆಗೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೊತ್ತಿಲ್ಲ ಎನ್ನುವುದನ್ನು ನಂಬಲು ಸಾಧ‍್ಯವೇ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.

ಸರ್ಕಾರದ ದುಡ್ಡಿನಲ್ಲಿ ಜಾಹೀರಾತು ನೀಡುವ ಯಡಿಯೂರಪ್ಪ ಮಹಾದಾಯಿ ಸಂಬಂಧ ಚರ್ಚೆ ಮಾಡಲು ಚರ್ಚಿಸಲು ಮಹಾರಾಷ್ಟ್ರಕ್ಕೆ ಹೋಗಿರುವುದಾಗಿ ಸುಳ್ಳು ಹೇಳಿದ್ದಾರೆ. ಮುಂಬೈನಲ್ಲಿ ಬಿಜೆಪಿ ಶಾಸಕರನ್ನು ಕೂಡಿ ಹಾಕಿದ್ದಕ್ಕೆ ಧನ್ಯವಾದ ಹೇಳಲು ಯಡಿಯೂರಪ್ಪ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ ಎಂದರು.

ನಾನು ಪರಿಶುದ್ಧವಾಗಿದ್ದೇನೆ. ನನಗೆ ಯಾವುದೇ ಭಯವಿಲ್ಲ. ನನಗೆ ಯಾರೂ ಸಂಕಟ ತರಲು ಸಾಧ್ಯವಿಲ್ಲ. ಫೋನ್ ಟ್ಯಾಪಿಂಗ್ ಇರಲಿ, ಐಎಂಎ ಹಗರಣವಾಗಲೀ ಎಲ್ಲವೂ ನನಗೆ ತಿಳಿದಿದೆ. ಐಎಂಎ ತನಿಖೆ ನಡೆಸಿದ್ದು ನಮ್ಮ ಎಸ್‍.ಐ.ಟಿ ಅಧಿಕಾರಿಗಳು. ದುಬೈಗೆ ಪರಾರಿಯಾಗಿದ್ದ ಆರೋಪಿಯನ್ನು ಕರೆದುಕೊಂಡು ಬಂದಿದ್ದು ರಾಜ್ಯದ ಪೊಲೀಸ್ ಅಧಿಕಾರಿಗಳು. ದುಬೈನಿಂದ ಕರೆದುಕೊಂಡುಬಂದಿದ್ದ ಮನ್ಸೂರ್ ಖಾನ್ ನನ್ನು ಜಾರಿನಿರ್ದೇಶನಾಲಯ ಅಧಿಕಾರಿಗಳು ದೆಹಲಿಗೆ ಕರೆದುಕೊಂಡು ಹೋಗಿದ್ದು ಏಕೆ? ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದರು.

ಕುಮಾರಸ್ವಾಮಿಗೆ ಸಂಕಟ ಎಂದು ಸುದ್ದಿ ಪ್ರಕಟಿಸಿದರೆ ನನಗೆ ಯಾವುದೇ ತೊಂದರೆಯಾಗುವುದಿಲ್ಲ. ಮಾಧ್ಯಮಗಳು ತಮ್ಮ ಖುಷಿಗೆ ಕುಮಾರಸ್ವಾಮಿಗೆ ಸಂಕಟ ಎಂದು ಬರೆದುಕೊಳ್ಳಲಿ ಎಂದರು.

ಅಕ್ರಮ ವರ್ಗಾವಣೆಯಲ್ಲಿ ಸರ್ಕಾರ ತೊಡಗಿದೆ. ದುಡ್ಡನ್ನು ಬಾಚಿಕೊಳ್ಳಲೆಂದೇ ಬಿಜೆಪಿ ಸರ್ಕಾರ ರಚನೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಒಬ್ಬ ಪ್ರಾಮಾಣಿಕ ಮಂತ್ರಿಯೂ ಇಲ್ಲ. ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದು ಏಕೆ ಎಂದು ಅಶ್ವತ್ಥ ನಾರಾಯಣ್ ಹೇಳಬೇಕು. ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ. ಸಮಯ ಬಂದಾಗ ಎಲ್ಲದರ ಬಗ್ಗೆಯೂ ಚರ್ಚೆ ಮಾಡುತ್ತೇನೆ. ನನ್ನ ಅವಧಿಯಲ್ಲಿ ಅಕ್ರಮವಾಗಿದೆ ಎಂದು ಹೇಳುವ ಅಶ್ವತ‍್ಥ ನಾರಾಯಣ ಸಾಕ್ಷಿ ಬಹಿರಂಪಡಿಸಲಿ ಎಂದು ಸವಾಲು ಹಾಕಿದರು.

ವಿಮಾನದಲ್ಲಿ ಶಾಸಕರನ್ನು ಕರೆದುಕೊಂಡು ಹೋಗಿದ್ದ ಅಶ್ವತ್ಥ ನಾರಾಯಣ್ ನಿಂದ ತಾವು ಕಲಿಯುವಂತಹದ್ದು ಏನು ಇಲ್ಲ ಎಂದರು.

Related Stories

No stories found.

Advertisement

X
Kannada Prabha
www.kannadaprabha.com