ಬಿಜೆಪಿ ಸೇರುತ್ತೇನೆ: ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅನಿಲ್ ಲಾಡ್

ಮುಂದಿನ ವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆಂದು ಕಾಂಗ್ರೆಸ್ ನಾಯಕ ಹಾಗೂ ಬಳ್ಳಾರಿಯ ಮಾಜಿ ಶಾಸಕ ಅನಿಲ್ ಲಾಡ್ ಅವರು ಶನಿವಾರ ಹೇಳಿದ್ದಾರೆ. 
ಅನಿಲ್ ಲಾಡ್c
ಅನಿಲ್ ಲಾಡ್c

ಬಳ್ಳಾರಿ: ಮುಂದಿನ ವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆಂದು ಕಾಂಗ್ರೆಸ್ ನಾಯಕ ಹಾಗೂ ಬಳ್ಳಾರಿಯ ಮಾಜಿ ಶಾಸಕ ಅನಿಲ್ ಲಾಡ್ ಅವರು ಶನಿವಾರ ಹೇಳಿದ್ದಾರೆ. 

ಪಕ್ಷದ ಸ್ಥಳೀಯ ನಾಯಕರು ನನ್ನನ್ನು ಬದಿಗೊತ್ತುತ್ತಿದ್ದಾರೆ. ಇದರಿಂದ ಮನಸ್ಸಿಗೆ ಬೇಸರವಾಗಿದ್ದು, ಯಾವುದೇ ನಿರೀಕ್ಷೆಗಳಿಲ್ಲದೆ ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತನಾಗಿ ಮುಂದಿನ ವಾರ ಸೇರ್ಪಡೆಗೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.
 
ಪಕ್ಷದ ಕಾರ್ಯಕ್ರಮಗಳ ಕುರಿತಂತೆ ನನಗೆ ಯಾವುದೇ ನಾಯಕರು ಮಾಹಿತಿ ನೀಡುತ್ತಿಲ್ಲ. ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ದರಾಮಯ್ಯ ನಾಯಕತ್ವದಲ್ಲಿ ಪಾದಯಾತ್ರೆ ನಡೆದಿತ್ತು. ಪಕ್ಷ ಗೆದ್ದ ಬಳಿಕ ನನ್ನನ್ನು ಬದಿಗೊತ್ತಲಾಗಿದೆ. ಪಕ್ಷಕ್ಕೆ ಇದೀಗ ನನ್ನ ಅಗತ್ಯವಿಲ್ಲ. ಹೊಸ ಹೊಸ ನಾಯಕರು ಇದೀಗ ಪಕ್ಷಕ್ಕೆ ಬಂದಿದ್ದಾರೆ. ಹಾಗಾಗಿ ಪಕ್ಷಕ್ಕೆ ನಾವು ಬೇಡದವರಾಗಿದ್ದೇವೆ. 

ಒಬ್ಬ ಕಾರ್ಪೋರೇಟರ್ ನನ್ನ ವಿರುದ್ಧ ಮಾತನಾಡಿದರೂ, ಯಾರೂ ಇದರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಮತ್ತೆ ಚುನಾವಣೆ ಬರುತ್ತಿದ್ದು, ಪಕ್ಷದ ಪ್ರತೀಯೊಬ್ಬ ಹಿರಿಯ ನಾಯಕನೂ ಟಿಕೆಟ್ ಗಾಗಿ ಬೇಡಿಕೆ ಇಡುತ್ತಿದ್ದಾರೆ. ಜನರ ಬಳಿ ಹೋಗಿ ನಾನು ಮತ ಭಿಕ್ಷೆ ಕೇಳಬೇಕು. ಗೆದ್ದ ಬಳಿಕ ಅಧಿಕಾರ ಅವರಿಗೆ. ಹಿರಿಯ ನಾಯಕರಾದ ಕಾರಣ ಅವರಿಗೆ ಆದ್ಯತೆ ನೀಡುತ್ತಾರೆ. ಬಿಜೆಪಿ ಸೇರ್ಪಡೆ ಕುರಿತು ಶ್ರೀರಾಮುಲು ಬಳಿ ಮಾತನಾಡಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. 


ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಮಾತನಾಡುವುದು ತಪ್ಪಾಗುತ್ತದೆ. ಹೀಗಾಗಿ ನಾನು ಸ್ಥಳೀಯ ನಾಯಕರೊಂದಿಗೆ ಮಾತನಾಡಿದ್ದೇನೆ. ಶ್ರೀರಾಮುಲು ಹಾಗೂ ಆನಂದ್ ಸಿಂಗ್ ಇಬ್ಬರೂ ಸ್ವಾಗತಿಸಿದ್ದಾರೆ. ಸಂತೋಷ್ ಜೀ ಹಾಗೂ ಯಡಿಯೂರಪ್ಪ ಅವರ ಬಳಿ ಅವರೇ ನನ್ನನ್ನು ಕರೆದುಕೊಂಡು ಹೋಗುತ್ತಾರೆಂದು ತಿಳಿಸಿದ್ದಾರೆ. 

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಈಗಾಗಲೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮಾಹಿತಿ ನೀಡಿದ್ದೇನೆ. ನಾನು ಯಾರಿಗೂ ಬೆನ್ನಿಗೆ ಚೂರಿ ಹಾಕಿಲ್ಲ. ನಾನು ಎಲ್ಲಿಯೂ ಓಡಿ ಹೋಗುತ್ತಿಲ್ಲ ಎಂದಿದ್ದಾರೆ. 

ಅನಿಲ್ ಲಾಡ್ ಅವರ ಈ ನಿರ್ಧಾರ ಇದೀಗ ಕಾಂಗ್ರೆಸ್ ನಾಯಕರಿಗೆ ಆಘಾತವನ್ನು ತಂದಿದೆ. 

ಅನಿಲ್ ಲಾಡ್ ಅವರ ಹೇಳಿಕೆ ಸಾಕಷ್ಟು ಆಶ್ಚರ್ಯವನ್ನು ತಂದಿದೆ. ಪಕ್ಷ ತೊರೆಯುವ ಕುರಿತು ನಮಗೆ ಯಾವುದೇ ಮಾಹಿತಿಗಳಿಲ್ಲ ಎಂದು ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com