ಎಸ್ ಟಿ ಸೋಮಶೇಖರ್ ವಿರುದ್ಧ 'ಕೈ' ಆಕ್ರೋಶ, ಮುಂದೆ ಇದೆ ಮಾರಿ ಹಬ್ಬ ಎಂದ ರೇವಣ್ಣ

ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡುತ್ತಿರುವ ಅನರ್ಹ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಮೇಲ್ಮನೆ ಸದಸ್ಯ ಹೆಚ್.ಎಂ. ರೇವಣ್ಣ, ಎಸ್ ಟಿ ಸೋಮಶೇಖರ್ ಅವರದ್ದು ನಾಲಿಗೆಯೇ ಅಥವಾ ಬೇರೆಯೇ ಎಂದು ಪ್ರಶ್ನಿಸಿದ್ದಾರೆ.
ಎಚ್ ಎಂ ರೇವಣ್ಣ
ಎಚ್ ಎಂ ರೇವಣ್ಣ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡುತ್ತಿರುವ ಅನರ್ಹ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಮೇಲ್ಮನೆ ಸದಸ್ಯ ಹೆಚ್.ಎಂ. ರೇವಣ್ಣ, ಎಸ್ ಟಿ ಸೋಮಶೇಖರ್ ಅವರದ್ದು ನಾಲಿಗೆಯೇ ಅಥವಾ ಬೇರೆಯೇ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಜನನಾಯಕನನ್ನಾಗಿ ಮಾಡಿತ್ತು. ಇದೀಗ ಕಾಂಗ್ರೆಸ್ ವಿರುದ್ಧವೇ ಟೀಕೆ ಮಾಡುತ್ತಿರುವ ಅವರ ವರ್ತನೆ ಖಂಡನೀಯ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಮುನಿರತ್ನ ಈ ಮೂವರು ಆಡಿದ ಆಟಗಳನ್ನು ನಾವು ನೋಡಿದ್ದೇವೆ. ಈ ಮೊದಲು ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳುತ್ತಿದ್ದವರ ನಾಲಿಗೆಗೆ ಈಗ ಏನಾಗಿದೆ ಎಂದು  ತಿರುಗೇಟು ನೀಡಿದರು. 

ಎಲ್ಲಾ ಅಧಿಕಾರ  ಅನುಭವಿಸಿದವರು ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯೇ ಎಂದು ಎಸ್.ಟಿ.ಸೋಮಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು. 

ಪಕ್ಷದಿಂದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಈಗ ಪಕ್ಷದ ಬಗ್ಗೆಯೇ ಮಾತನಾಡುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮನೆಗೆ ಬಂದಾಗ ಇವರಿಗೆಲ್ಲ ವಿಶೇಷ ಆತಿಥ್ಯ ಸಿಗುತ್ತಿತ್ತು. ಇದೀಗ ಸಿದ್ದರಾಮಯ್ಯ ಅವರ ಬಗ್ಗೆಯೇ  ಮಾತನಾಡುತ್ತಿರುವವರುಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಸಚಿವರಾಗಿದ್ದ ಕೃಷ್ಣ ಭೈರೇಗೌಡ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಮೋಸ ಮಾಡಿದರು. ಇವರ ನಿಮ್ಮ ನಾಲಿಗೆಗೆ ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಇವರ ಆಟ ಬಹಳ ದಿನ  ನಡೆಯುವುದಿಲ್ಲ. ಮುಂದೆ ಮಾರಿಹಬ್ಬ ಇದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಬೆಂಗಳೂರು ಕಾಂಗ್ರೆಸಿಗರು ಸಹ ಸೋಮಶೇಖರ್ ಹಾಗೂ ಇತರೆ ಅನರ್ಹ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕುರಿತು ಹಗುರ ಹೇಳಿಕೆ ನೀಡಿರುವುದನ್ನು ಖಂಡಿಸಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಕಾಂಗ್ರೆಸ್ ಅಧ್ಯಕ್ಷ ಜಿ.ಕೃಷ್ಣಪ್ಪ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕೋಟಿ ಅನುದಾನ ಪಡೆದುಕೊಂಡಿದ್ದ ಎಸ್.ಟಿ. ಸೋಮಶೇಖರ್ ಇಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಪಕ್ಷಕ್ಕೆ ದ್ರೋಹ ಮಾಡಿದವರು ಅನರ್ಹರಾಗಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು ಸರಿಯಲ್ಲ. ದಿನೇಶ್ ಗುಂಡೂರಾವ್ ಜಿಲ್ಲಾಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನ ನಿಭಾಯಿಸಿ ಈಗ ಅಧ್ಯಕ್ಷರಾಗಿದ್ದಾರೆ. ಇಂತವರ ಬಗ್ಗೆ ಕೀಳು ಪದ ಬಳಕೆ ಮಾಡಿದ್ದು ಸರಿಯಲ್ಲ ಎಂದು ಎಸ್.ಟಿ.ಸೋಮಶೇಖರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ಕಳ್ಳನನ್ನ ಕಳ್ಳ ಎಂದು ಕರೆಯುವುದು ತಪ್ಪಲ್ಲ. ಹಾಗೆಯೇ ಅನರ್ಹ ಶಾಸಕರನ್ನು  ಅನರ್ಹ ಎಂದು ಉಚ್ಚರಿಸುವದರಲ್ಲಿ ತಪ್ಪೇನು ಎಂದು ಎಸ್.ಟಿ.ಸೋಮಶೇಖರ್ ಅವರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ಬಿಡಿಎ ಅಧ್ಯಕ್ಷರೂ ಆದ ಎಸ್.ಟಿ.ಸೋಮಶೇಖರ್, ಎಲ್ಲವನ್ನ ಅನುಭವಿಸಿ ಈಗ ಪಕ್ಷದ್ರೋಹಿಯಾಗಿದ್ದಾರೆ. ಮುಂದಿನ ದಿನದಲ್ಲಿ ಸೋಮಶೇಖರ್ ಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಮೇಯರ್ ಚುನಾವಣೆಯನ್ನು ಮುಂದಕ್ಕೆ ಹಾಕುವ ಯತ್ನ ನಡೆದಿದೆ. ಬಿಬಿಎಂಪಿ ವಿವಿಧ ಯೋಜನೆಗಳ ಅನುದಾನವನ್ನು ಸರ್ಕಾರ ಕಡಿತ ಮಾಡಿರುವುದು ಸರಿಯಲ್ಲ. 1200 ಕೋಟಿ ರೂ. ವೈಟ್ ಟ್ಯಾಪಿಂಗ್ ಅನುದಾನದ ಹಣವನ್ನು ಅನರ್ಹ ಶಾಸಕರಿಗೆ ನೀಡಿರುವ ಸರ್ಕಾರದ ಕ್ರಮ ಖಂಡನೀಯ ಎಂದರು.

ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಎಸ್ ಟಿ ಸೋಮಶೇಖರ್ ಕೆಪಿಸಿಸಿ ಅಧ್ಯಕ್ಷರ ಕುರಿತು ಅಸಂವಿಧಾನಿಕ ಪದ ಬಳಕೆ ಮಾಡಿರುವುದು ಸರಿಯಲ್ಲ. ಮೊದಲು ಅವರು ಯಾವ ಸ್ಥಿತಿಯಲ್ಲಿದ್ದರು ಎನ್ನುವುದನ್ನು ಅರಿತು ಮಾತನಾಡಬೇಕು. ಕಾಂಗ್ರೆಸ್ ಅವರಿಗೆ ಐದು ಬಾರಿ ಟಿಕೆಟ್ ನೀಡಿತ್ತು. ಅದರಲ್ಲಿ ಸಿದ್ದರಾಮಯ್ಯರ ಆಶೀರ್ವಾದದಿಂದ ಎರಡನೇ ಬಾರಿ ಶಾಸಕರಾದರು. ಈಗ ಅವರೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಸೋಮಶೇಖರ್ ಹಿರಿತನಕ್ಕೆ ಒಳ್ಳೆಯದಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com