ಮೈಸೂರು ಭಾಗದವರಿಗೆ ಸಚಿವ ಸ್ಥಾನ ತಪ್ಪಲು ವಿಶ್ವನಾಥ್ ಕಾರಣ: ಸಾ.ರಾ.ಮಹೇಶ್

ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರ ಒತ್ತಡದ ಮೇರೆಗೆ ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

Published: 21st August 2019 01:20 PM  |   Last Updated: 21st August 2019 02:13 PM   |  A+A-


H.Vishwanath And Sa Ra Mahesh

ವಿಶ್ವನಾಥ್ ಮತ್ತು ಸಾ ರಾ ಮಹೇಶ್

Posted By : Shilpa D
Source : UNI

ಮೈಸೂರು: ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರ ಒತ್ತಡದ ಮೇರೆಗೆ ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಯಾರು ಸಭೆ ಸೇರಿದ್ದರು, ಮುಖ್ಯಮಂತ್ರಿಯನ್ನು ಭೇಟಿಯಾಗಿ ಯಾವ ಬೇಡಿಕೆ ಮುಂದಿಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಹಂತದಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
 
ಕೊಡಗು ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಇದೆ, ಬೇರೆಯವರು ಬಂದು ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಗೊತ್ತಿಲ್ಲ.  ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಪೈಕಿ ಯಾರನ್ನು ಬೇಕಾದರೂ ಸಚಿವರನ್ನಾಗಿ ಮಾಡಿಕೊಳ್ಳಬಹುದಿತ್ತು, ಮೈಸೂರಿನಲ್ಲೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು ಇದ್ದಾರೆ,  ಬೆಂಗಳೂರು ಮೂಲದವರು ಬಂದು ಗಜಪಯಣಕ್ಕೆ ಪೂಜೆ ಮಾಡಲಿದ್ದಾರೆ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಯ ಯಾವೊಬ್ಬರೂ ಸಂಪುಟದಲ್ಲಿ ಇಲ್ಲ,  ಪ್ರವಾಹ ಸಂದರ್ಭದಲ್ಲಿ 135 ಕಿ.ಮೀ. ದೂರ ಪ್ರಯಾಣ ಮಾಡಿ ಸಚಿವರನ್ನು ಭೇಟಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

ನನ್ನ ಮಾತಿಗೆ, ಸವಾಲಿಗೆ ನಾನು ಈಗಲು ಬದ್ಧ,  ವಿಶ್ವನಾಥ್ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಎನ್ನುವುದಾದರೆ, ಅವರ ನೆಚ್ಚಿನ ದೇಗುಲ ಕಪ್ಪಡಿ ದೇಗುಲಕ್ಕೆ ಬಂದು ಪ್ರಮಾಣ ಮಾಡಲಿ, ಅವರೇ ನಿಗದಿಪಡಿಸುವ ದೇಗುಲಕ್ಕೆ ಬಂದು, ಪ್ರಮಾಣ ಮಾಡಲಿ ಎಂದು ಸಾ.ರಾ. ಮಹೇಶ್ ಸವಾಲು ಹಾಕಿದರು.

ಅವರು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲವೆಂದು ಹೇಳಿದರೆ,  ಆಗ ನಾನು ರಾಜಕೀಯ ಜೀವನದಿಂದಲೇ ನಿವೃತ್ತಿ ಆಗುತ್ತೇನೆ ಎಂದು ಮತ್ತೊಮ್ಮೆ ಸವಾಲು ಹಾಕಿದರು.


ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ಬದಲಾಗಿದ್ದಾರೆ, ಅಂದಿನ ಯಡಿಯೂರಪ್ಪನವರಿಗೂ ಇಂದಿನ ಯಡಿಯೂರಪ್ಪನವರಿಗೂ ಸಾಕಷ್ಟು ವ್ಯತ್ಯಾಸ ಆಗಿದೆ, ಈ ವರೆಗೆ ಸುಮಾರು 600 ಅಧಿಕಾರಿಗಳ ವರ್ಗಾವಣೆ ಆಗಿದೆ, ಕೇವಲ 27 ದಿನಗಳಲ್ಲಿ ಸಚಿವ ಸಂಪುಟ ಇಲ್ಲದೆ ವರ್ಗಾವಣೆ ಮಾಡುತ್ತಿದ್ದಾರೆ.  ಮೂರು ವರ್ಷ ಪೂರೈಸದ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಿದ್ದಾರೆ ಎಂದು ಸಾ.ರಾ.ಮಹೇಶ್ ಟೀಕಿಸಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಲಕ್ಷಣಗಳೇ ಜಾಸ್ತಿ ಇವೆ, ಬಿಜೆಪಿ ಸಚಿವ ಸಂಪುಟ ರಚನೆ ಮಾಡಿರುವುದನ್ನು ನೋಡಿದರೆ ಮಧ್ಯಂತರ ಚುನಾವಣೆ ಬೇಗನೇ ಬರುತ್ತದೆ ಎಂಬ ಅನುಮಾನ ಮೂಡುತ್ತಿದೆ. ಅರ್ಧ ಸಚಿವ ಸಂಪುಟ ಮಾತ್ರ ಭರ್ತಿ ಮಾಡಲಾಗಿದೆ. ಇದರಿಂದಾಗಿ ಹಲವರಿಗೆ ಅಸಮಾಧಾನವಾಗಿದೆ. ಸರ್ಕಾರಕ್ಕೆ ಹೆಚ್ಚು ಆಯಸ್ಸು ಇಲ್ಲ ಅನ್ನಿಸುತ್ತಿದೆ. ನನಗೆ ಮಾತ್ರವಲ್ಲ, ರಾಜ್ಯದ ಜನರಿಗೂ ಹೀಗೆಯೇ ಅನ್ನಿಸುತ್ತಿದೆ.  ಮಧ್ಯಂತರ ಚುನಾವಣೆ ಯಾರಿಗೂ ಬೇಡ, ಈಗಲೇ ರಾಜ್ಯ ಪ್ರವಾಹದಲ್ಲಿ ನೊಂದಿದೆ, ಆದ್ದರಿಂದ ಮಧ್ಯಂತರ ಚುನಾವಣೆ ಬೇಡ ಎಂದು ಸಾ.ರಾ.ಮಹೇಶ್ ಹೇಳಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp