ಉಪ ಚುನಾವಣೆ: ಶಿವಾಜಿನಗರ ಮತದಾರರಲ್ಲಿ ಗೊಂದಲ ಸೃಷ್ಟಿಸಿದ ಅಭ್ಯರ್ಥಿಗಳು

ಬಿಎಸ್ ವೈ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ 15 ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬೀಳಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಎಸ್ ವೈ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ 15 ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬೀಳಲಿದೆ. ಈ ಮಧ್ಯೆ ಶಿವಾಜಿನಗರ ಕ್ಷೇತ್ರದಲ್ಲಿ ಹಲವು ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರು ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷದ್, ಜೆಡಿಎಸ್ ನಿಂದ ತನ್ವೀರ್ ಅಹ್ಮದ್ ಉಲ್ಹಾ, ಬೆರೋಜ್ಗರ್ ಆದ್ಮಿ ಅಧಿಕಾರಿ ಪಕ್ಷದಿಂದ ಸುಹೇಲ್ ಸಿದ್ಧಿಕ್ ಸೇಠ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಅಬ್ದುಲ್ ಸುಭಾನ್ ಹಾಗೂ ಕರ್ನಾಟಕ ಕಾರ್ಮಿಕರ ಪಕ್ಷದಿಂದ ಮುಖ್ತಾರ್ ಅಲಿ ಖಾನ್ ಸ್ಪರ್ಧಿಸಿದ್ದಾರೆ. 

ಸೈಯದ್ ಆಸಿಫ್ ಬುಖಾರಿ, ಇಶ್ತಿಯಾಕ್ ಅಹ್ಮದ್, ಶಹನ್ವಾಜ್ ಅಹ್ಮದ್ ಹಾಗೂ ಮೊಹಮ್ಮದ್ ಅನಿಫ್ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಅಖಾಡಕ್ಕಿಳಿದಿದ್ದಾರೆ. ಅಲ್ಲದೆ ಹಲವು ಕ್ರೈಸ್ತ ಅಭ್ಯರ್ಥಿಗಳು ಸಹ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಇನ್ನು ಕಣದಲ್ಲಿರುವ ಏಕೈಕ ಹಿಂದೂ ಅಭ್ಯರ್ಥಿ, ಬಿಜೆಪಿಯ ಎಂ.ಸರವಣ ಅವರನ್ನು ಕಣಕ್ಕಿಳಿಸಿದೆ. ಇವರು ಹಲವು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದು ಪಳಗಿದವರು. ಕ್ಷೇತ್ರದಲ್ಲಿರುವ ಸುಮಾರು 35 ಸಾವಿರ ತಮಿಳು ಭಾಷಿಕ ಮತದಾರರ ಮೇಲೆ ಕಣ್ಣಿಟ್ಟು ಇವರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಎಲ್ಲೆಡೆ ಇದೆ. ಹಿಂದೂ ಮತ್ತು ತಮಿಳು ಮತದಾರರ ನೆಲೆಯಲ್ಲಿ ಅದೃಷ್ಟ ಪರೀಕ್ಷಿಸಲು ಬಿಜೆಪಿ ಮುಂದಾಗಿದೆ. 

ಉಪ ಚುನಾವಣೆಯಲ್ಲಿ ಹಲವು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಮತ ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಶಿವಾಜಿನಗರ ಮತದಾರರಾದ ಅರ್ಬರ್ ಅಹ್ಮದ್ ಅವರು ಹೇಳುತ್ತಾರೆ.

ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಸಾಕಷ್ಟು ರಣತಂತ್ರ ರೂಪಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಹೀಗಾಗಿ ಬಿಜೆಪಿ ಬಿಟ್ಟು ಉಳಿದ ಐದು ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಆದರೆ ಇದರಿಂದ ಮತ ವಿಭಜನೆಯಾಗಲಿದೆ ಎನ್ನುತ್ತಾರೆ ಅಹ್ಮದ್.

ಇಲ್ಲಿ ತಮಿಳು ಭಾಷಿಕರು, ಮುಸ್ಲಿಂ ಮತ್ತು ಕ್ರೈಸ್ತ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಶಿವಾಜಿನಗರ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಅನರ್ಹ ಶಾಸಕ ರೋಷನ್ ಬೇಗ್ ವಿರುದ್ಧ ಕ್ಷೇತ್ರದ ಮತದಾರರು ಆಕ್ರೋಶಗೊಂಡಿದ್ದು, ಅದನ್ನು ತನ್ನ ಪರ ಮತವಾಗಿ ತಿರುಗಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com