ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೇ ಗೋಲಿಬಾರ್ ಆಗುತ್ತದೆ: ಸಿದ್ದರಾಮಯ್ಯ

ಮಂಗಳೂರು ಗೋಲಿಬಾರ್ ಬಗ್ಗೆ ಸಿಐಡಿ ತನಿಖೆಯಿಂದ ಸತ್ಯ ಹೊರಲಾರದು. ಆದ್ದರಿಂದ ಘಟನೆಯ ಬಗ್ಗೆ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮಂಗಳೂರು: ಮಂಗಳೂರು ಗೋಲಿಬಾರ್ ಬಗ್ಗೆ ಸಿಐಡಿ ತನಿಖೆಯಿಂದ ಸತ್ಯ ಹೊರಲಾರದು. ಆದ್ದರಿಂದ ಘಟನೆಯ ಬಗ್ಗೆ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪೊಲೀಸರು ಬಂಧಿಸಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರಿಗೆ ಇಂದು ಭೇಟಿ ನೀಡಿ ಗೋಲಿಬಾರ್‌ನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಲಿಬಾರ್‌ ಬಗ್ಗೆ ಮುಖ್ಯಮಂತ್ರಿಗಳೇ ತನಿಖೆಗೂ ಮೊದಲೇ ಪೊಲೀಸರಿಗೆ ಸರ್ಟಿಫಿಕೇಟ್ ಕೊಡುತ್ತಿದ್ದಾರೆ.  ಸಿಐಡಿ ತನಿಖೆಗೆ ಕೊಟ್ಟಿರುವುದು ಇದು ಕಣ್ಣೊರೆಸುವ ತಂತ್ರ. ಇದರಿಂದ ಸತ್ಯ ಹೊರಬರಲಾರದು. ಗುಂಡು ಹಾರಿಸಿದವರನ್ನು ರಕ್ಷಿಸಲು ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಮೃತರನ್ನು 3ನೇ ಮತ್ತು 7ನೇ ಆರೋಪಿ ಮಾಡಿರುವುದು ದುಃಖದ ವಿಚಾರ. ವಿದ್ಯಾರ್ಥಿಗಳು ಮತ್ತು ಕಾರ್ಮಿಕರನ್ನು ಕೇಸ್ ನಲ್ಲಿ ಸೇರಿಸಲಾಗಿದೆ. ಇವರನ್ನು ತಕ್ಷ ಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ಗೋಲಿಬಾರ್ ನಡೆದು ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.‌ ಇಬ್ಬರೂ ಬಡ ಕುಟುಂಬದಿಂದ ಬಂದವರು, ಜಲೀಲ್ ಅವರಿಗೆ ಇಬ್ಬರು ಮಕ್ಕಳಿದ್ದು, ಇವರೇ ಕುಟುಂಬಕ್ಕೆ ಆಧಾರಸ್ತಂಭ. ಮತ್ತೊಬ್ಬ ಯುವಕ ನೌಸಿನ್ ಮೃತರಾಗಿದ್ದಾರೆ, ಅವರ ಕುಟುಂಬದಲ್ಲೂ ಆತ ಆಧಾರವಾಗಿದ್ದ. ಇಂದು ನಾನು, ಮಾಜಿ ಸಚಿವರಾದ ಎಂ.ಬಿ ಪಾಟೀಲ್, ಮತ್ತು ಜಮೀರ್ ಅಹ್ಮದ್ ಮೃತರ ಮನೆಗಳಿಗೆ ಭೇಟಿ ನೀಡಿ, ಮೃತರ  ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು ನಾವು  ಬಂದಿದ್ದೇವೆ ಎಂದರು .

ನಾನು ಡಿಸೆಂಬರ್ 20ರಂದು ಮಂಗಳೂರಿಗೆ  ಹೊರಟಿದ್ದೆ. ವಿಶೇಷ ವಿಮಾನ ಕೂಡ ಬುಕ್ ಆಗಿತ್ತು, ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಮ್ಮ ವಿಮಾನ ಲ್ಯಾಂಡ್ ಆಗಲು ಅನುಮತಿ ನೀಡಲಿಲ್ಲ. ಮರುದಿನ  ಬರಲು ನಿರ್ಧರಿಸಿದ್ದೆ. ಆದರೆ ಮಂಗಳೂರು ಕಮೀಷನರ್ ನನಗೆ ನೊಟೀಸ್ ಕೊಟ್ಟಿದ್ದರು. "ನೀವು  ಮಂಗಳೂರಿಗೆ ಬರಬೇಡಿ. 144 ಸೆಕ್ಷನ್ ಜಾರಿಯಲ್ಲಿದೆ, ಮಂಗಳೂರು, ಗೋವಾ, ಮೈಸೂರು ಮೂಲಕ ವಿಮಾನ ಕಾರು, ರೈಲು ಮುಖಾಂತರವೂ ಬರಬಾರದು "ಎಂದು ನೋಟೀಸ್ ಕೊಟ್ಟಿದ್ದರು. ನಾನು  ವಿಪಕ್ಷ ನಾಯಕನಾಗಿದ್ದೇನೆ. ನನಗೂ ಕೂಡ ಕಾನೂನು ರೀತಿಯಲ್ಲಿ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಕೊಟ್ಟಿದ್ದಾರೆ. ವಿಪಕ್ಷ ಇರುವುದು ಸರ್ಕಾರದ ತಪ್ಪು ಒಪ್ಪುಗಳನ್ನು ಜನರಿಗೆ ತಿಳಿಸಲು, ಆದರೆ ನನಗೆ ಬಿಡಲಿಲ್ಲ ಎಂದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದರು.

ಗೋಲಿಬಾರ್ ಮುನ್ನ ಗಾಳಿಯಲ್ಲಿ ಗುಂಡು ಹಾರಿಸಿಲ್ಲ, ಅಶ್ರುವಾಯು ಶೆಲ್ ಸಿಡಿಸಿಲ್ಲ. ಏಕಾಏಕಿ ಅಮಾಯಕರ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ. ಇದೇನು ಪೊಲೀಸ್ ರಾಜ್ಯವೇ? ಪ್ರಜಾಪ್ರಭುತ್ವ ಇರುವ ಸರ್ಕಾರವೇ? ನಾಗರಿಕ ಸರ್ಕಾರವಾ ಇದು? ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಮಂಗಳೂರು ಘಟನೆಗೆ ಪೊಲೀಸರು, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ಜವಾಬ್ದಾರಿ ಹೊರಬೇಕು. ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ. ಮಂಗಳೂರಿನಲ್ಲಿ ಕರ್ಫ್ಯೂ ಇರುವಾಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಸಂಸದೆ ಶೋಭ  ಕರಂದ್ಲಾಜೆ ಬರುತ್ತಾರೆ. ಇದರ ಅರ್ಥ ಏನು? ವಿಪಕ್ಷದವರನ್ನು ಮಾತ್ರ  ಬಿಡುವುದಿಲ್ಲ.  ಸಿಎಂ ಸೂಚನೆ ಮೇರೆಗೆ ಇವೆಲ್ಲಾ ನಡೆದಿದೆ ಎಂದು ಅವರು ನೇರವಾಗಿ ಆರೋಪಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಪೊಲೀಸರ ಬಳಿ ಗನ್ ಗಳಿವೆ ಎಂಬುದು ಮರೆತು ಹೋಗಿತ್ತು, ಯಡಿಯೂರಪ್ಪ  ಅಧಿಕಾರಕ್ಕೆ ಬಂದಾಗಲೇ ಗೋಲಿಬಾರ್ ಆಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಪೌರತ್ವ ಕಾಯಿದೆ ವಿಷಯದಲ್ಲಿ ಮಂಗಳೂರಿನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆ ತರುವ ಅವಶ್ಯಕತೆ ಇರಲಿಲ್ಲ, ಒಂದು  ವೇಳೆ 144 ಸೆಕ್ಷನ್ ಹಾಕದಿದ್ದರೆ ಜನರು ಪ್ರತಿಭಟನೆ ಮಾಡಿ ಹೋಗುತ್ತಿದ್ದರು. ಪ್ರತಿಭಟನೆ ಮಾಡುವುದು ಜನರ ಮೂಲಭೂತ  ಹಕ್ಕು.  ಸರ್ಕಾರ ಹೇಳಿದ ಮಾತು ಒಪ್ಪಿಕೊಳ್ಳಬೇಕು ಎಂಬುದು ಯಾವ ಕಾನೂನಿನಲ್ಲೂ ಇಲ್ಲ. ಇಲ್ಲಿ ಸಂವಿಧಾನದ ಕಗ್ಗೊಲೆಯಾಗಿದೆ. ಮೂಲಭೂತ ಹಕ್ಕು ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದಾಗ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ಆದರೆ ಇಲ್ಲಿ ಯಾಕೆ ಗೋಲಿಬಾರ್ ಆಯ್ತು? ಎಂದು ಪ್ರಶ್ನಿಸಿದ ಅವರು, ಕೇರಳದಿಂದ ಬಂದವರು ಗಲಾಟೆ ಮಾಡಿದರು ಎಂದು ಹೇಳುತ್ತಿದ್ದಾರೆ. ಹಾಗಾದರೆ ಕೇರಳದವರನ್ನು ಯಾರನ್ನಾದರೂ ಬಂಧಿಸಿದ್ದಾರಾ?. ಸರ್ಕಾರ ಮತ್ತು ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಪ್ರತಿಭಟನಕಾರರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕ್ತಿದ್ದರು ಎಂದು ಅವರು ಹೇಳುತ್ತಿದ್ದಾರೆ. ಹಾಗಾದರೆ ಪೊಲೀಸ್ ಠಾಣೆ ಹತ್ತಿರ ಏನಾದರೂ ಫೈರಿಂಗ್ ಆಗಿದೆಯೇ? ಇಲ್ಲ, ಠಾಣೆಯಿಂದ ದೂರದಲ್ಲಿ ಗೋಲಿಬಾರ್ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಬೊಟ್ಟು ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ವೈಟ್ ಸುಳ್ಳು ಎನ್ನುತ್ತಾರೆ. ಇವರ ಸುಳ್ಳನ್ನು ಬ್ಲಾಕ್ ಸುಳ್ಳು ಎಂದು ಕರೆಯಬೇಕಾಗಿದೆ?   ಇವರು ಜನರನ್ನು ಸಾಯಿಸಲು ಗುಂಡು ಹಾರಿಸಿದ್ದರು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಒಬ್ಬ ಇನ್ಸ್ ಪೆಕ್ಟರ್ 25 ಗುಂಡು ಹಾರಿಸಿದರೂ ಒಬ್ಬ ಕೂಡ ಸಾಯಲಿಲ್ಲಾ ಎಂದು ಹೇಳುತ್ತಾನೆ.‌ ಆ ಇನ್ಸ್ ಪೆಕ್ಟರ್‌ನನ್ನು ತಕ್ಷ ಣ ಕೆಲಸದಿಂದ ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಪೊಲೀಸರು ಭಯದ ವಾತಾವರಣ ಉಂಟು ಮಾಡಿದ್ದಾರೆ, ಗೋಲಿಬಾರ್ ಮಾಡುವ ಅವಶ್ಯಕತೆ ಇರಲಿಲ್ಲ ಅಂತಹ  ಪರಿಸ್ಥಿತಿ ನಿರ್ಮಾಣ ಆಗಿರಲಿಲ್ಲ. ಈ ಕುರಿತು ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಂದೂಕು ಇರೋದೇ ಗುಂಡು ಹಾರಿಸೋಕೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. ಸುರೇಶ್ ಅಂಗಡಿ ಒಂದು ಸೆಕೆಂಡ್ ಕೂಡ ಮಂತ್ರಿಯಾಗಿರಲು ನಾಲಾಯಕ್. ಅಂಗಡಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಖಾದರ್ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ, ಆ ಪಕ್ಷದವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಗಲಭೆ ಸಂಬಂಧ ಈಗಾಗಲೇ ಬಂಧಿಸಿರುವ ಅಮಾಯಕರನ್ನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಜಾರ್ಖಂಡ್ ಫಲಿತಾಂಶ 
ಜಾರ್ಖಂಡ್  ನಲ್ಲಿ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಬಹುಮತ ಬಂದಿದೆ. ಇತ್ತೀಚಿನ  ಚುನಾವಣೆಯಲ್ಲಿ ಎಲ್ಲೆಡೆ ಬಿಜೆಪಿಯವರು ಸೋಲುತ್ತಿದ್ದಾರೆ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ  ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹೇಳುತ್ತಾರೆ.‌ ಈಗ ಜನರು ಬಿಜೆಪಿ ಮುಕ್ತ ಭಾರತ  ಮಾಡ್ತಾರೆ ಎಂಬ  ವಿಶ್ವಾಸ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಬಿಜೆಪಿ  ಸೋಲುತ್ತದೆ ಎಂದು ಸಿದ್ದರಾಮಯ್ಯ ಜಾರ್ಖಂಡ್ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com