ನಾನು ಪರಿಸ್ಥಿತಿಯ ರಾಜಕಾರಣಿಯಲ್ಲ: ಸುಮಲತಾ ಅಂಬರೀಷ್

ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವಾಗ ಮಾಜಿ ರಾಜಕಾರಣಿ, ನಟ ಅಂಬರೀಷ್ ಅವರ ಪತ್ನಿ ...
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿದ ಸುಮಲತಾ ಮತ್ತು ಅಭಿಷೇಕ್
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿದ ಸುಮಲತಾ ಮತ್ತು ಅಭಿಷೇಕ್

ಮಂಡ್ಯ: ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವಾಗ ಮಾಜಿ ರಾಜಕಾರಣಿ, ನಟ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿದೆ.

ಅವರು ನಿನ್ನೆ ಮಂಡ್ಯದ ನಾಗಮಂಗಲದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ತಮ್ಮ ಪುತ್ರ ಅಭಿಷೇಕ್ ಜೊತೆ ಭೇಟಿ ನೀಡಿದ್ದರು.

ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ನಾಡಿನ ಜೊತೆ ನಮ್ಮ ಕುಟುಂಬ ದೀರ್ಘಕಾಲದಿಂದ ಭಾವನಾತ್ಮಕ ನಂಟು ಬೆಸೆದುಕೊಂಡು ಬಂದಿದೆ. ನನ್ನ ಪತಿಯವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ಮಾನ ಕೊಟ್ಟ ಮಂಡ್ಯ ಜಿಲ್ಲೆಯ ಜನತೆಯೊಂದಿಗೆ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಲು ನಾನು ಮತ್ತು ಪುತ್ರ ಒಲವು ತೋರಿದ್ದೇವೆ. ಆದರೆ ನಾನು ಪರಿಸ್ಥಿತಿಯ ರಾಜಕಾರಣಿಯಲ್ಲ ಎಂದು ಹೇಳುವ ಮೂಲಕ ಸುಮಲತಾ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ.

ಈ ಹಿಂದೆ ತಮ್ಮ ಪತಿ ಅಂಬರೀಷ್ ಅವರು ನನ್ನ ಪತ್ನಿ ಮತ್ತು ಪುತ್ರ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದರು ಎಂಬ ಮಾತನ್ನು ಕೂಡ ಸುಮಲತಾ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದರು.

ಅಂಬರೀಷ್ ಅವರ ನಿಧನದ ನಂತರ ಮಂಡ್ಯದ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಚುನಾವಣೆಗೆ ನಿಲ್ಲುವಂತೆ ನನ್ನ ಮೇಲೆ ಅತೀವ ಒತ್ತಡ ಹೇರುತ್ತಿದ್ದಾರೆ. ಆದರೆ ನಾನಿನ್ನೂ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಜನರೊಂದಿಗೆ ಕುಳಿತು ಮಾತುಕತೆ ನಡೆಸಿ ಆಲೋಚನೆ ಮಾಡಿದ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಬಲ್ಲೆ. ಆದರೆ ರಾಜಕೀಯಕ್ಕೆ ಬಂದರೂ, ಬಾರದಿದ್ದರೂ ಕೂಡ ಮಂಡ್ಯ ಜಿಲ್ಲೆಯ ಜನತೆಯೊಂದಿಗೆ ನಮ್ಮ ಬೆಸುಗೆ, ಬಾಂಧವ್ಯ ಹೀಗೆಯೇ ಮುಂದುವರಿಯುತ್ತದೆ ಎಂದರು.

ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಸುಮಲತಾ ಅವರನ್ನು ಮಂಡ್ಯದ ಗೌಡ್ತಿಯಲ್ಲ ಎಂದು ಹೇಳಿಕೆ ನೀಡಿದ ಬಗ್ಗೆ ಕೇಳಿದಾಗ ಸುಮಲತಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಆದರೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಕಳೆದ ಎರಡು ತಿಂಗಳಿನಿಂದ ಮಠಕ್ಕೆ ಬರಬೇಕೆಂದುಕೊಂಡಿದ್ದೆ, ಆದರೆ ಸಮಯ ಸಿಕ್ಕಿರಲಿಲ್ಲ ಎಂದರು.

ಇನ್ನು ಮಾಧ್ಯಮದವರೊಂದಿಗೆ ಮಾತನಾಡಿದ ಅಭಿಷೇಕ್, ರಾಜಕೀಯಕ್ಕೆ ಬರುವ ಅಂತಿಮ ನಿರ್ಧಾರ ಅಮ್ಮನಿಗೆ ಬಿಟ್ಟಿದ್ದು. ಅವರು ಏನೇ ನಿರ್ಧಾರ ತೆಗೆದುಕೊಳ್ಳಲಿ ನಾನು ಅವರನ್ನು ಬೆಂಬಲಿಸುತ್ತೇನೆ. ನಮ್ಮ ಅಭಿಮಾನಿಗಳ ಭಾವನೆಗಳಿಗೂ ಬೆಲೆ ಕೊಡುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com