ಕೊಟ್ಟ ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ: ಸಿದ್ದು- ಡಿವಿಎಸ್ ಟ್ವೀಟ್ ವಾರ್!

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಮಧ್ಯೆ ಟ್ವೀಟ್‌ ವಾರ್‌ ಮುಂದುವರಿದಿದೆ. ಕಾಂಗ್ರೆಸ್ ...
ಡಿವಿ ಸದಾನಾಂದಗೌಡ ಮತ್ತು ಸಿದ್ದರಾಮಯ್ಯ
ಡಿವಿ ಸದಾನಾಂದಗೌಡ ಮತ್ತು ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಮಧ್ಯೆ ಟ್ವೀಟ್‌ ವಾರ್‌  ಮುಂದುವರಿದಿದೆ.  ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸಲು  ಬಿಜೆಪಿ ನಮ್ಮ ಪಕ್ಷದ ಶಾಸಕರಿಗೆ ಹಣದ ಆಮೀಷವೊಡ್ಡಿ ವಾಮ ಮಾರ್ಗದ ಮೂಲಕ ಸರ್ಕಾರ ರಚಿಸಲು ಮುಂದಾಗಿದೆ ಎಂದು ಮಾಜಿ ಸಿದ್ದರಾಮಯ್ಯ ಆರೋಪಿಸಿದ್ದರು. 
ಈ ಆರೋಪಕ್ಕೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ನಲ್ಲಿ ತಿರುಗೇಟು ನೀಡಿದ್ದಾರೆ.
ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಇಂಥದೊಂದು ಟೀಕೆಯ ಅಗತ್ಯವಿತ್ತೇ?  ಎಂದು ಟೀಕಿಸಿದ್ದಾರೆ
ಸದಾನಂದಗೌಡರೇ ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ. ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ. ಎಷ್ಟೆಂದರೂ ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿ ಹೋದವರಲ್ಲವೇ ನೀವು?ಎಂದು ಸಿದ್ದರಾಮಯ್ಯ ರೀಟ್ವೀಟ್ ಮಾಡಿದ್ದಾರೆ.
'ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ರಾಜಕಾರಣದ ಬಗ್ಗೆ ಟೀಕೆ ಮಾಡಿದಾಗ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಲಾರದಷ್ಟು ಅಸಹನೆ ಶುರುವಾಗಿದ್ದು ಯಾವಾಗ ? ಚಾಮುಂಡೇಶ್ವರಿಯಲ್ಲಿ ಸೋತ ನಂತರವೇ ?ಅಥವಾ ಮುಖ್ಯಮಂತ್ರಿ ಕುರ್ಚಿ ಕಳೆದುಕೊಂಡ ನಂತರದ ಫಲಶೃತಿಯೋ ?'
ಎಂದು ಟಾಂಗ್ ನೀಡಿದ್ದಾರೆ.
'ಸದ್ಯಕ್ಕೆ ನಿಮ್ಮ ಸ್ಥಾನಮಾನ ಸಮನ್ವಯ ಸಮಿತಿಗೆ ಸೀಮಿತ, ನೀವು ಈಗ ಉರುಳಿಸುತ್ತಿರುವ ರಾಜಕೀಯ ದಾಳ ಬಹಳ ಹಳೆಯದು, ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದಕ್ಕೆ ಮುನ್ನ ನಿಮ್ಮ ಬೆನ್ನು ನೋಡಿ. ಮುಲಾಜಿನಲ್ಲಿ ಹಗ್ಗದ ಮೇಲೆ ನಡೆಯುವವರನ್ನು ನೋಡಿ ಮುಸಿಮುಸಿ ನಗಬೇಡಿ ಎಂದು ಡಿವಿಎಸ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಆಪರೇಷನ್‌ ಕಮಲಕ್ಕೆ ಯತ್ನಿಸುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರಕಾರ ಪತನಕ್ಕೆ ಪರೋಕ್ಷ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯನವರೇ ಸ್ವಯಂ ಪ್ರೇರಿತ ಹೇಳಿಕೆ ಹಾಗೂ ಟ್ವೀಟ್‌ ಮಾಡುತ್ತಿದ್ದಾರೆ. ನಾವು ಸರಕಾರ ಬೀಳಿಸುವುದಕ್ಕೆ ಪ್ರಯತ್ನ ನಡೆಸಲಿ ಎಂಬ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. 
ಬಿಜೆಪಿಯವರು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ತಮ್ಮದೇ ಪಕ್ಷದ ಶಾಸಕರನ್ನು ಸಿದ್ದರಾಮಯ್ಯ ಅಪಮಾನಿಸುತ್ತಿದ್ದಾರೆ. ಸಿದ್ದರಾಮಯ್ಯ ಸಾರಥ್ಯದಲ್ಲಿ ನಡೆದ ಚುನಾವಣೆ ಎದುರಿಸಿ ಕಾಂಗ್ರೆಸ್‌ ಶಾಸಕರು ಗೆದ್ದಿದ್ದಾರೆ. ಅವರೆಲ್ಲರೂ ಬಿಜೆಪಿಯತ್ತ ವಾಲಿದ್ದಾರೆ ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com