ಮತ್ತಷ್ಟು ಕೈ ಶಾಸಕರ ರಾಜೀನಾಮೆ, ಬರ ಪ್ರವಾಸ ಮುಂದೂಡಿದ ಬಿಎಸ್ ವೈ

ಅಸಮಾಧಾನಗೊಂಡಿರುವ ಮತ್ತಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ...
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಅಸಮಾಧಾನಗೊಂಡಿರುವ ಮತ್ತಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಬಿ ಎಸ್‌ ಯಡಿಯೂರಪ್ಪ ಅವರು ಬರಪೀಡಿತ ಜಿಲ್ಲೆಗಳ ನಿಗದಿತ ಪ್ರವಾಸವನ್ನು ಮುಂದಕ್ಕೆ ಹಾಕಿ ರಾಜಕೀಯ ಬೆಳವಣಿಗಳ ಬಗ್ಗೆ ಗಮನ ಹರಿಸಿದ್ದಾರೆ. 
ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಇಂದಿನಿಂದ ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಅಧ್ಯಯನ ಪ್ರವಾಸಕ್ಕೆ ಹೋಗಬೇಕಿತ್ತು.
ಬರ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಹೆಚ್ಚಿನ ಜನರು ಉದ್ಯೋಗ ಹುಡುಕಿಕೊಂಡು ಮುಂಬೈ, ಹೈದರಾಬಾದ್, ಪುಣೆ ಮತ್ತು ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.
ನೈರುತ್ಯ ಮುಂಗಾರು ವೈಫಲ್ಯದಿಂದಾಗಿ ರಾಜ್ಯದ ಜನರು ಸಂಕಷ್ಟದಲ್ಲಿದ್ದಾಗ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿದೇಶ ಪ್ರವಾಸವೇ ಬಹಳ ಮುಖ್ಯವಾಗಿದೆ ಎಂದು ದೂರಿದ್ದಾರೆ. ಈಗ ಅವರೇ ಬರ ಅಧ್ಯಯನ ಪ್ರವಾಸವನ್ನು ಮುಂದಕ್ಕೆ ಹಾಕಿ ರಾಜಕೀಯ ಬೆಳವಣಿಗೆ ಬಗ್ಗೆ ಗಮನ ಹರಿಸಿದ್ದಾರೆ ಎನ್ನಲಾಗಿದೆ. 
ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ, ರಾಜ್ಯ ರಾಜಕೀಯದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಕಾಣಿಸಿಕೊಂಡು 13 ತಿಂಗಳ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಭವಿಷ್ಯದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. 
ಸದ್ಯ ಅಮೆರಿಕಾ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು ಈಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.
ಆನಂದ್ ಸಿಂಗ್ ರಾಜೀನಾಮೆ ಪತ್ರ ಬಂದಿದೆ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ದೃಢಪಡಿಸಿದ್ದರೂ ರಮೇಶ್ ಜಾರಕಿ ಹೊಳಿ ರಾಜೀನಾಮೆ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ.
ಆನಂದ್ ಸಿಂಗ್ ಅವರ ರಾಜೀನಾಮೆ ಸ್ವೀಕರಿಸಿ ಕ್ರಮ ಕೈಗೊಳ್ಳುವ ಮೊದಲು ಅವರನ್ನು ಕರೆಸಿ ಸ್ಪಷ್ಟನೆ ಕೇಳುವುದಾಗಿಯೂ ರಮೇಶ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com