ರಾಹುಲ್ ಹೋರಾಟಕ್ಕೆ ಜನ ಬೆಂಬಲ ನೀಡಲಿಲ್ಲ, ಬಿಜೆಪಿ ಏರ್ ಸ್ಟ್ರೈಕ್ ಮುಂದಿಟ್ಟು ಚುನಾವಣೆ ಗೆದ್ದಿದೆ: ದೇವೇಗೌಡ

ರಾಹುಲ್ ಗಾಂಧಿಗೆ ಬಿಜೆಪಿ ವಿರುದ್ಧ ಹೋರಾಟ ಮಾಡುವ ಛಲ ಇತ್ತು, ಚುನಾವಣೆಯಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ....
ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ
ಬೆಂಗಳೂರು: ರಾಹುಲ್ ಗಾಂಧಿಗೆ ಬಿಜೆಪಿ ವಿರುದ್ಧ ಹೋರಾಟ ಮಾಡುವ ಛಲ ಇತ್ತು, ಚುನಾವಣೆಯಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಮನಸ್ಸಿಗೆ ಬಹಳ ನೋವಾಗಿರಬಹುದು. ಅದಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್​ ಡಿ ದೇವೇಗೌಡ ಅವರು ಬುಧವಾರ ಹೇಳಿದ್ದಾರೆ.
ಇಂದು ಜೆಪಿ ಭವನದಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ಬಳಿಕ ಸುದ್ದಿಗಾರರ ಜೊತೆ  ಮಾತನಾಡಿದ ಅವರು, ರಾಹುಲ್​ ಗಾಂಧಿ ಅವರನ್ನು ಸಂಸತ್ತು  ಪ್ರವೇಶಿಸಿದ ದಿನದಿಂದ ನೋಡಿದ್ದೇನೆ. ಅವರಲ್ಲಿ ಯುವಕರ ಹುಮ್ಮಸ್ಸು, ಹೋರಾಟ ಮಾಡುವ ಮನೋಭಾವ ಅಗಾಧವಾಗಿದೆ. ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಾಗಿ ರಾಷ್ಟ್ರಾದ್ಯಂತ ಸಭೆಗಳನ್ನು ಮಾಡಿದ್ದಾರೆ. ಸಾಕಷ್ಟು ಪ್ರಯತ್ನ ಮಾಡಿದರೂ ಚುನಾವಣೆಯಲ್ಲಿ  ಸೋತಿದ್ದಕ್ಕೆ ನೋವಿನಿಂದ ರಾಜೀನಾಮೆ ನೀಡಿದ್ದಾರೆ. ದೇಶದ ಜನತೆ ಮೋದಿ ಅವರಿಗೆ ಆಶೀರ್ವಾದ ಮಾಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ  ಹಿನ್ನಡೆಯಾಗಿದೆ ಎಂದು ಲೋಕಸಭಾ ಚುನಾವಣೆ ಫಲಿತಾಂಶವನ್ನು ವಿಶ್ಲೇಷಿಸಿದರು. 
ಪ್ರಧಾನಿ ನರೇಂದ್ರ ಮೋದಿ ಅವರ ಗ್ರಾಫ್ ಕೂಡ ಕೆಳಮುಖವಾಗಿ ಸಾಗುತ್ತಿತ್ತು. ಆದರೆ ಪಾಕಿಸ್ತಾನದ ವಿರುದ್ಧ ನಡೆಸಿದ ಏರ್ ಸ್ಟ್ರೈಕ್ ಒಂದು ಘಟನೆ ಅವರಿಗೆ ಚುನಾವಣೆಯಲ್ಲಿ ಸಾಕಷ್ಟು ನೆರವಾಯಿತು. ಮೋದಿಯಿಂದ ಮಾತ್ರ ದೇಶ ಉಳಿಸಲು ಸಾಧ್ಯ ಎಂದು ಬಿಜೆಪಿಯವರು ಬಿಂಬಿಸುವ ಮೂಲಕ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಸಫಲರಾದರು ಎಂದರು.
ನೆಹರು, ಇಂದಿರಾ ಗಾಂಧಿ ಅವರ ಒಂದೇ ಕುಟುಂಬ ಐವತ್ತು ವರ್ಷ ದೇಶದ ಆಡಳಿತ ನಡೆಸಿದ್ದಾರೆ ಎಂದು ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ಬಿಂಬಿಸಲು ಇದ್ದ ಏಕೈಕ ಅಸ್ತ್ರವಾಗಿತ್ತು. ಕಾಂಗ್ರೆಸ್ ಪಕ್ಷ ಪ್ರಸ್ತುತ ಬೇರೆಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದು. ಆದರೆ ಪಕ್ಷದ  ಜವಾಬ್ದಾರಿಯನ್ನು ರಾಹುಲ್​ ಗಾಂಧಿ ಅವರೇ ತೆಗೆದುಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಸಲಹೆ ನೀಡಿದರು.
ಇದೇ ವೇಳೆ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕ ದೇಶಕ್ಕೆ ತೆರಳಿದ ಬೆನ್ನಲ್ಲೆ ಮೈತ್ರಿ ಸರ್ಕಾರ ಪತನಗೊಳಿಸುವ ಕೆಲಸಕ್ಕೆ ಕೆಲವರು ಕೈಹಾಕಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಚಿವ ಡಿ ಕೆ ಶಿವಕುಮಾರ್ ಈ ಸರ್ಕಾರವನ್ನು ಉಳಿಸಿಕೊಳ್ಳುವತ್ತ ಪ್ರಯತ್ನ ನಡೆಸಿದ್ದಾರೆ. ಕುಮಾರಸ್ವಾಮಿ ಅಮೆರಿಕಾದಿಂದಲೇ ಕಾಂಗ್ರೆಸ್ ನಾಯಕರ ನಿರಂತರ ಸಂಪರ್ಕದಲ್ಲಿದ್ದು, ಸರ್ಕಾರದ ರಕ್ಷಣೆ ಮಾಡಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದಿಂದ ನಾವು ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದೇವೆ. ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದಂತೆ ಪಕ್ಷ ಸಂಘಟಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸೋನಿಯಾ ಗಾಂಧಿ ಅವರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ತೀರ್ಮಾನ ಮಾಡಿದರು. ಆದರೀಗ ಇಬ್ಬರು ರಾಜೀನಾಮೆ ಕೊಟ್ಟಿದ್ದಾರೆ. ನಾಳೆ ಮತ್ತೆ ಐದು ಜನ, ಮತ್ತೊಂದು ತಂಡ 4 ಜನ ರಾಜೀನಾಮೆ ಕೊಡುತ್ತಾರೆಂದು ಎಂದು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅಮೆರಿಕಾದಲ್ಲಿ ಇದ್ದುಕೊಂಡೇ ಎಲ್ಲರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ ಕೂಡಾ ಎಲ್ಲವನ್ನು ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಳಿ 80 ಕೋಟಿ ರೂ ಹಣದ ಬೇಡಿಕೆ ಇಟ್ಟಿದ್ದರೆಂದು ಪಿರಿಯಾಪಟ್ಟಣ್ಣದ ಶಾಸಕ ಕೆ ಮಹದೇವ್ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ಇಂತಹ ವಿಚಾರದಲ್ಲಿ ತಮ್ಮನ್ನು ಏನನ್ನೂ ಕೇಳಬೇಡಿ. ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ದೆಹಲಿಯಲ್ಲಿ ಎಚ್ ವಿಶ್ವನಾಥ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ದ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು , ಎಚ್ ವಿಶ್ವನಾಥ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ತಮಗೆ ತಿಳಿದಿಲ್ಲ. ಆದರೂ ಎಚ್ ವಿಶ್ವನಾಥ್ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com