ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ರಾಜೀನಾಮೆ? ಖರ್ಗೆಗೆ ಸಿಎಂ ಪಟ್ಟ ಸಾಧ್ಯತೆ

ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿರುವ 13 ಶಾಸಕರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕವೂ ಸರ್ಕಾರ ಉಳಿಸಿಕೊಳ್ಳುವತ್ತ...
ಮಲ್ಲಿಕಾರ್ಜುನ್ ಖರ್ಗೆ - ಎಚ್ ಡಿ ಕುಮಾರಸ್ವಾಮಿ
ಮಲ್ಲಿಕಾರ್ಜುನ್ ಖರ್ಗೆ - ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿರುವ 13 ಶಾಸಕರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕವೂ ಸರ್ಕಾರ ಉಳಿಸಿಕೊಳ್ಳುವತ್ತ ಕಾಂಗ್ರೆಸ್ - ಜೆಡಿಎಸ್ ನಾಯಕರು ಗಂಭೀರ ಚಿಂತನೆ ನಡೆಸಿದ್ದು, ಅಗತ್ಯ ಬಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬದಲಾವಣೆಯಂತಹ ಕಠಿಣ ನಿರ್ಧಾರ ಅನಿವಾರ್ಯ ಎನ್ನುವ ನಿಲುವಿಗೆ ಬಂದಿದ್ದಾರೆ.
ಸರ್ಕಾರ ರಕ್ಷಣೆಗೆ ಹಲವು ಸೂತ್ರಗಳನ್ನು ಸಿದ್ಧಪಡಿಸಿದ್ದು, ಇದರಲ್ಲಿ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸುವುದು ಸೇರಿದೆ. ಸರ್ಕಾರ ಉಳಿಯಬೇಕಾದರೆ ಅತೃಪ್ತ ಶಾಸಕರ ಬೇಡಿಕೆಗಳಿಗೆ ಮನ್ನಣೆ ನೀಡುವುದು ಅನಿವಾರ್ಯ ಎಂಬುದನ್ನು ಮನಗಂಡಿದ್ದಾರೆ.
ರಾಜೀನಾಮೆ ನೀಡಿರುವ ಹಲವು ಶಾಸಕರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಮೈತ್ರಿ ಸರ್ಕಾರವನ್ನು ಪಾರು ಮಾಡಲು ಮುಖ್ಯಮಂತ್ರಿ ಬದಲಾಗಬೇಕು ಎಂದಾದರೆ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಲಿ ಎಂಬ ಸಂದೇಶವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನೀಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತಾವು ಖರ್ಗೆ ಸಿಎಂ ಆಗುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಇಷ್ಟು ದಿನ ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದ ಖರ್ಗೆ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದು, ಅತೃಪ್ತ ಶಾಸಕರ ಮನವೊಲಿಸಲು ಸೂಚಿಸಿದ್ದಾರೆ ಎಂದು ಯುಎನ್ಐ ವರದಿ ಮಾಡಿದೆ.
ಈ ಮಧ್ಯೆ ಇಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ದೇವೇಗೌಡರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗುವುದಾದರೆ ಬೆಂಬಲ ನೀಡುವ ಬಗ್ಗೆ ನೋಡೋಣ ಎಂದಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಇನ್ನು ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ಸರಣಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು, ಮೈತ್ರಿ ಸರ್ಕಾರ ರಕ್ಷಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಸುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಎಲ್ಲಾ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಸೇರಿದಂತೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಅಂತಿಮ ಅಸ್ತ್ರವಾಗಿ ಮೈತ್ರಿ ಸರ್ಕಾರವನ್ನು ವಿಸರ್ಜಿಸುವ ಮೂಲಕ ಮಧ್ಯಂತರ ಚುನಾವಣೆಗೆ ಹೋಗುವ ಬಗ್ಗೆಯೂ ಕಾಂಗ್ರೆಸ್ ನಾಯಕರು ಗಂಭೀರ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com