
ಸಾರಾ ಮಹೇಶ್
Source : Online Desk
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಭದ್ರತೆಯ ಸುಳಿಗೆ ಸಿಲುಕಿ ತೊಳಲಾಡುತ್ತಿರುವುದರ ನಡುವೆಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಹಾಗೂ ಸಚಿವ ಸಾರಾ ಮಹೇಶ್ ಅವರು ಬಿಜೆಪಿ ಹಿರಿಯ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡಸಿದ್ದು, ಜೆಡಿಎಸ್, ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಇಂದು ರಾತ್ರಿ 9 ಗಂಟೆಯ ಸುಮಾರಿಗೆ ಕುಮಾರ ಕೃಪಾ ಗೆಸ್ಟ್ ಹೌಸ್‍ನಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ ಹಾಗೂ ಮುರಳೀಧರ್ ರಾವ್ ಅವರೊಂದಿಗೆ ಸಾರಾ ಮಹೇಶ್ ಅವರು ಮಾತುಕತೆ ನಡೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಈ ಭೇಟಿ ಜೆಡಿಎಸ್ನ ಮಿತ್ರ ಪಕ್ಷ ಕಾಂಗ್ರೆಸ್ ಅನ್ನು ತಲ್ಲಣಗೊಳಿಸಿದ್ದು, ಕೆಲ ಮೂಲಗಳ ಪ್ರಕಾರ, ಜೆಡಿಎಸ್, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್ ಬೇಷರತ್ ಬೆಂಬಲ ನೀಡಲಿದೆ. ಯಡಿಯೂರಪ್ಪ ಸಿಎಂ ಆಗಲಿದ್ದಾರೆ, ರೇವಣ್ಣ ಡಿಸಿಎಂ ಆಗಲಿದ್ದಾರೆ. ಈ ಸಂಬಂಧ ಸಾರಾ ಮಹೇಶ್ ಅವರು ಬಿಜೆಪಿ ನಾಯಕರೊಂದಿಗೆ ಮಾತನಾಡಿದರೆನ್ನಲಾಗುತ್ತಿದೆ.
ಬಿಜೆಪಿ ಮುಖಂಡರ ಭೇಟಿ ಬಳಿಕ ಮಾತನಾಡಿದ ಸಾರಾ ಮಹೇಶ್ ಅವರು, ಈಶ್ವರಪ್ಪನವರು ಕ್ಷೇತ್ರದ ಬಗ್ಗೆ ವಿಚಾರಿಸಲು ಬಂದಿದ್ದರು. ನಾನು ಸಚಿವ, ಹೀಗಾಗಿ ಭೇಟಿಯಾಗಲು ಬಂದಿದ್ದೆ. ಅದರಲ್ಲಿ ಏನು ತಪ್ಪು ಎಂದು ಮರು ಪ್ರಶ್ನೆ ಮಾಡಿದರು.
ಈ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಸಾರಾ ಮಹೇಶ್ ಹಾಗೂ ಬಿಜೆಪಿ ನಾಯಕ ಭೇಟಿ ಆಕಸ್ಮಿಕ ಅಷ್ಟೆ. ರಾಜಕೀಯ ಬಿಕ್ಕಟ್ಟಿನ ನಡುವೆಯೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿ-ಜೆಡಿಎಸ್ ಸರ್ಕಾರ ರಚನೆ ಕೇವಲ ವದಂತಿ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಅವರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರಾ ಮಹೇಶ್ ಭೇಟಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
Stay up to date on all the latest ರಾಜಕೀಯ news