ಸ್ಪೀಕರ್ ವಿಚಾರಣೆ: ಗೈರು ಹಾಜರಾದ ಅತೃಪ್ತ ಶಾಸಕರು

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಸ್ಪೀಕರ್ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ರಮೇಶ್ ಕುಮಾರ್
ರಮೇಶ್ ಕುಮಾರ್
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಸ್ಪೀಕರ್ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ಸೋಮವಾರ ಸಂಜೆ ವಿಚಾರಣೆಗೆ ಆಗಮಿಸುವಂತೆ ಬಿಟಿಎಂ ಲೇಔಟ್‌ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಮಹಾಲಕ್ಷ್ಮಿ ಲೇಔಟ್‌ ಶಾಸಕ ಎಚ್‌ ಗೋಪಾಲಯ್ಯ ಅವರಿಗೆ ಸ್ಪೀಕರ್ ಕಚೇರಿಯಿಂದ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಆದರೆ ಈ ಇಬ್ಬರು ಶಾಸಕರು ಸ್ಪೀಕರ್‌  ಕಚೇರಿಗೆ ಕರೆ ಮಾಡಿ ವಿಚಾರಣೆಗೆ ಆಗಮಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮತ್ತೊಂದು ದಿನಾಂಕವನ್ನು ನಿಗದಿ ಮಾಡುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಸಭಾಧ್ಯಕ್ಷರ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ರಾಮಲಿಂಗಾರೆಡ್ಡಿ ಅವರು ತಂಗಿದ್ದ ಆನೇಕಲ್‌ ಬಳಿಯ ಫಾರ್ಮ್‌ ಹೌಸ್‌ಗೆ  ತೆರಳಿದ್ದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌  ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ,ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ನಿಯೋಗ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವ ಪ್ರಯತ್ನ ನಡೆಸಿತ್ತು. ಆದರೆ ರಾಮಲಿಂಗಾರೆಡ್ಡಿ ಯಾವುದೇ ನಿಲುವು ಬದಲಿಸದೆ ನಿಯೋಗಕ್ಕೆ ನಿರಾಸೆ ಮೂಡಿಸಿದ್ದರು.
ಆದರೂ ಇಂದು ವಿಧಾನ ಸಭೆ ಕಲಾಪ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಅವರ ಎದುರು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಇಂದು ಗೈರು ಹಾಜರಾಗುವ ಮೂಲಕ ಮೈತ್ರಿ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದ ಕೆಆರ್ ಪೇಟೆ ಶಾಸಕ ನಾರಾಯಣ ಗೌಡ, ಪ್ರತಾಪ್ ಗೌಡ ಪಾಟೀಲ್ ಹಾಗೂ ಆನಂದ್ ಸಿಂಗ್ ಕೂಡ ಶುಕ್ರವಾರ ಸ್ಪೀಕರ್ ರಮೇಶ್ ಕುಮಾರ್ ಮುಂದೆ ವಿಚಾರಣೆಗೆ ಗೈರು ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com