ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ: ಮೇಲ್ಮನೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಕಳೆದ ನಾಲ್ಕು ದಿನಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಧರಣಿ ಇಂದು ಮೇಲ್ಮನೆ ಕಲಾಪವನ್ನು ನುಂಗಿಹಾಕಿದೆ.
ವಿಧಾನ ಪರಿಷತ್
ವಿಧಾನ ಪರಿಷತ್
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಧರಣಿ ಇಂದು ಮೇಲ್ಮನೆ ಕಲಾಪವನ್ನು  ನುಂಗಿಹಾಕಿದೆ. ಎರಡು ಬಾರಿ ಮುಂದೂಡಿಕೆಯ ನಂತರ ಯಾವುದೇ ಚರ್ಚೆ ನಡೆಯದೇ ಕಲಾಪವನ್ನು ಸೋಮವಾರಕ್ಕೆ ಮುಂದೂಡುವಂತಾಯಿತು.
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ  ಸದಸ್ಯರು ಸಭಾಪತಿ ಪೀಠದ ಮುಂಭಾಗ  ಧರಣಿ ಮುಂದುವರೆಸಿದರು. ಮೈತ್ರಿ ಸರ್ಕಾರಕ್ಕೆ  ಬಹುಮತವಿಲ್ಲ.ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಭಿತ್ತಿಪತ್ರ  ಪ್ರದರ್ಶಿಸಿದರು.  
ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ,  ರಾಜ್ಯದಲ್ಲಿ ಬರಗಾಲವಿದೆ. ಬಹುಮತ ಇಲ್ಲದ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚ‌ನೆ  ಚರ್ಚೆ ಬದಲು ಕಾಲಹರಣ ಮಾಡುತ್ತಿದೆ, ಈಗ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯಕ್ಕೆ ಅನಗತ್ಯವಾಗಿ  ವಿಳಂಬ ಮಾಡುತ್ತಿದ್ದು, ರಾಜ್ಯಪಾಲರ ನಿರ್ದೇಶವನ್ನು ಧಿಕ್ಕರಿಸಿದ್ದಾರೆ. ಮುಖ್ಯಮಂತ್ರಿ  ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ವಿಶ್ವಾಸಮತ ಯಾಚನೆಗೆ ಮುಂದಾಗಬೇಕು ಎಂದು  ಆಗ್ರಹಿಸಿದರು. 
ಕೋಟಾ ಮಾತಿಗೆ ಆಡಳಿತರೂಢ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ,  ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದರು. ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದ್ದು, ಈ  ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮತ್ತು  ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ವಾಗ್ವಾದವುಂಟು ಮಾಡಿದ್ದರಿಂದ ಸದನದಲ್ಲಿ ತೀವ್ರ  ಗದ್ದಲವುಂಟಾಯಿತು.
 ಈ ಸಂದರ್ಭದಲ್ಲಿ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಧರ್ಮೇಗೌಡ  ಕಲಾಪವನ್ನು ಮಧ್ಯಾಹ್ನ 3.30 ಕ್ಕೆ ಮುಂದೂಡಿದರು.ಮತ್ತೆ ಸದನ ಸಮಾವೇಶಗೊಂಡಾಗಲೂ ಬಿಜೆಪಿ ತನ್ನ ಪಟ್ಟು ಸಡಿಲಿಸಲಿಲ್ಲ. ಕಲಾಪ ನಡೆಸಲು ಅವಕಾಶ ಮಾಡಿಕೊಡುವಂತೆ ಉಪಸಭಾಪತಿಗಳು ಮನವಿ ಮಾಡಿದರೂ, ಪ್ರತಿಪಕ್ಷ ಸದಸ್ಯರು ಕಿವಿಗಡೊದ ಹಿನ್ನೆಲೆಯಲ್ಲಿ  ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com