ಮೈತ್ರಿ ಸರ್ಕಾರ ಉಳಿವಿಗೆ ಜೆಡಿಎಸ್ ಸಿಎಂ ಹುದ್ದೆ ತ್ಯಾಗ ಮಾಡಲು ಮುಂದಾಗಿದೆ: ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆಗೆ ತೆರೆ ಎಳೆಯಲು ಕಾಂಗ್ರೆಸ್ ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವುದಾಗಿ ಜೆಡಿಎಸ್ ಹೇಳಿದ್ದು
ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆಗೆ ತೆರೆ ಎಳೆಯಲು ಕಾಂಗ್ರೆಸ್ ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವುದಾಗಿ ಜೆಡಿಎಸ್ ಹೇಳಿದ್ದು, ಕಾಂಗ್ರೆಸ್ ನಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಡಿ ಕೆ ಶಿವಕುಮಾರ್ ಈ ವಿಷಯ ಬಹಿರಂಗಪಡಿಸಿದ್ದು, ಸರ್ಕಾರ ಉಳಿಸಲು ಕಾಂಗ್ರೆಸ್ ನವರೇ ಮುಖ್ಯಮಂತ್ರಿಯಾಗಲಿ. ನಮ್ಮದೇನು ಅಭ್ಯಂತರವಿಲ್ಲ. ಸರ್ಕಾರ ಉಳಿಸಲು ನಾವು ತ್ಯಾಗಕ್ಕೆ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ ಎಂದರು. 
ನೀವು ಯಾರಿಗೆ ಬೇಕೋ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ತಮಗೆ ಜೆಡಿಎಸ್ ಮುಖಂಡರು ಹೇಳಿದಾರೆ. ಜತೆಗೆ ನಮ್ಮ ಹೈಕಮಾಂಡ್ ಜತೆಯೂ ಸಹ ಮಾತನಾಡಿದ್ದಾರೆ ಎಂದರು. 
ವಿಧಾನಸಭೆಯಲ್ಲಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಭವಿಷ್ಯ ಏನಾಗಲಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ತಮಗೆ ಭವಿಷ್ಯ ವಾಣಿ ಗೊತ್ತಿಲ್ಲ ಎಂದರು. 
ಸರ್ಕಾರ ಉರುಳಿದ ಮೇಲೂ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮುಂದುವರೆಯಲಿದೆಯೇ ಎನ್ನುವ ಪ್ರಶ್ನೆಗೆ,  ಈಗ ಅದೆಲ್ಲ ಬೇಡ. ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ; ಎಂದಷ್ಟೇ ಹೇಳಿದರು ಡಿ.ಕೆ. ಶಿವಕುಮಾರ್
ಬಿಎಸ್ಪಿ ಶಾಸಕ ಶಾಸಕ ಎನ್. ಮಹೇಶ್ ಸೋಮವಾರ ಮತ್ತು ಮಂಗಳವಾರ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಸದನದಿಂದ ದೂರ ಉಳಿಯುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಗಮನ ಸೆಳೆದಾಗ,  ಮಹೇಶ್ ನಾಳೆ ಸದನಕ್ಕೆ ಬರುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಎಂದರು. ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿರುವ ಬಗ್ಗೆ ತಮಗೇನು ಗೊತ್ತಿಲ್ಲ. ನಾವು ನಮ್ಮ ಶಾಸಕರನ್ನು ಕರೆ ತರುವ ಜಂಜಾಟದಲ್ಲಿದೇವೆ. ಶಾಸಕರು ಎಲ್ಲಿದಾರೆ ಎಂದು ಪತ್ತೆ ಹಚ್ಚಿ ಮಾತುಕತೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com