ಅತೃಪ್ತ ಶಾಸಕರ ಅನರ್ಹತೆ: ತೀರ್ಪು ಕಾಯ್ದಿರಿಸಿದ ಸ್ಪೀಕರ್

ವಿಧಾನಸಭೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 16 ಅತೃಪ್ತ ಶಾಸಕರ ಸದಸ್ಯತ್ವ ಅನರ್ಹತೆ ವಿಚಾರಣೆ ತೀರ್ಪನ್ನು ಸ್ಪೀಕರ್ ರಮೇಶ್ ಕುಮಾರ್ ಕಾಯ್ದಿರಿಸಿದ್ದಾರೆ...
ರಮೇಶ್ ಕುಮಾರ್
ರಮೇಶ್ ಕುಮಾರ್
ಬೆಂಗಳೂರು: ವಿಧಾನಸಭೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 16 ಅತೃಪ್ತ ಶಾಸಕರ ಸದಸ್ಯತ್ವ ಅನರ್ಹತೆ ವಿಚಾರಣೆ ತೀರ್ಪನ್ನು ಸ್ಪೀಕರ್ ರಮೇಶ್ ಕುಮಾರ್ ಕಾಯ್ದಿರಿಸಿದ್ದಾರೆ. 
ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿದ್ದು ಸೇರಿದಂತೆ 8 ಅರ್ಜಿಗಳ ವಿಚಾರಣೆಯನ್ನು ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ಕೈಗೆತ್ತಿಕೊಂಡರು.
ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ಶಾಸಕರಿಗೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ ಶಾಸಕರು ಸ್ಪೀಕರ್ ಗೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪರವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾದ ಮಂಡಿಸಿ, ಶಾಸಕರ ಪರವಾಗಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ತಂಡದ ಆರು ವಕೀಲರು ಪ್ರತಿವಾದ ಮಾಡಿದರು.
ವಿಚಾರಣೆ ವೇಳೆ ಶಾಸಕರು ರಾಜೀನಾಮೆ ನೀಡಿದ ಬಳಿಕ ಅವರ ಮೇಲೆ ಒತ್ತಡ ಹೇರಲು ವಿಪ್ ಜಾರಿಮಾಡಲಾಗಿದೆ. ಶಾಸಕರು ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿರುವುದರಿಂದ ಅವರಿಗೆ ಅನರ್ಹತೆ ಅನ್ವಯ ಆಗುವುದಿಲ್ಲ. ಶಾಸಕರು ಸ್ಪೀಕರ್ ಕಚೇರಿಗೆ ವಿಚಾರಣೆಗೆ ಆಗಮಿಸಲು ಕಾಲಾವಕಾಶ ನೀಡಬೇಕು ಎಂದು ಶಾಸಕರ ಪರ ವಕೀಲರು ಪ್ರತಿವಾದ ಮಾಡಿದರು.
ವಾದ ಮಂಡಿಸಿದ ವಿ.ಎಸ್.ಉಗ್ರಪ್ಪ, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಕಳೆದ ಫೆಬ್ರವರಿಯಲ್ಲಿ ವಿಪ್ ನೀಡಲಾಗಿದೆ. 11 ಜನ ಶಾಸಕರಿಗೆ ರಾಜೀನಾಮೆ ಸಲ್ಲಿಸುವ ಮೊದಲೇ ವಿಪ್ ನೀಡಿದ್ದು, ವಿಪ್ ನಿಂದ ಬಚಾವ್ ಆಗಲು ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಶಾಸಕತ್ವವನ್ನು ಅನರ್ಹಗೊಳಿಸಬೇಕೆಂದು ಮನವಿ ಮಾಡಿದರು.
ಸತತ ಎರಡು ಗಂಟೆಗಳ ಕಾಲ ನಡೆದ ವಾದ ಪ್ರತಿವಾದವನ್ನು ಆಲಿಸಿದ ಸ್ಪೀಕರ್ ರಮೇಶ್ ಕುಮಾರ್, ತಮ್ಮ ಆದೇಶ ಕಾಯ್ದಿರಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕರು ಸ್ಪೀಕರ್ ಕಚೇರಿಗೆ ಭೇಟಿ ಕೊಟ್ಟ ಬೆನ್ನಲ್ಲೇ ಬಿಜೆಪಿ ಶಾಸಕ ಮಾಧುಸ್ವಾಮಿ ನೇತೃತ್ವದ ನಿಯೋಗವೂ ಭೇಟಿಕೊಟ್ಟು ಕಾರ್ಯಕಲಾಪಗಳನ್ನು ಆಲಿಸಿತು. 
ವಿಚಾರಣೆ ಬಳಿಕ ಉಗ್ರಪ್ಪ ಮಾತನಾಡಿ, ಸಭಾಧ್ಯಕ್ಷರ ಕಚೇರಿಯಿಂದ ಅತೃಪ್ತ ಶಾಸಕರು ವಿಚಾರಣೆಗೆ ಹಾಜರಾಗುವಂತೆ ಅಂತಿಮ ನೋಟಿಸ್ ನೀಡಲಾಗಿತ್ತಾದರೂ ಅವರು ವಿಚಾರಣೆಗೆ ಹಾಜರಾಗಿಲ್ಲ. ಶಾಸಕರ 6 ವಕೀಲರು ಮಾತ್ರ ಹಾಜರಿದ್ದು, ಸಿದ್ದರಾಮಯ್ಯ ಅವರ ಪರ ತಾವು ವಾದ ಮಂಡಿಸಿರುವುದಾಗಿ ಹೇಳಿದರು.
ಶಾಸಕರ ಖರೀದಿ ನಿಲ್ಲಿಸಬೇಕು. ವಿಪ್ ಉಲ್ಲಂಘಿಸಿರುವ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಮನವಿ ಮಾಡಲಾಗಿದ್ದು, ಸ್ಪೀಕರ್ ತಮ್ಮ ಆದೇಶ ಕಾಯ್ದಿರಿಸಿದ್ದಾರೆ ಎಂದರು.
ಶಾಸಕರು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿರುವುದರಲ್ಲಿ ದುರುದ್ದೇಶ ಅಡಗಿದೆ. ಶಾಸಕರು ಅನರ್ಹರಾದರೆ ಮಂತ್ರಿ ಆಗಲು ಸಾಧ್ಯವಿಲ್ಲ. ಹೀಗಾಗಿ ನಾಲ್ಕು ವಾರ ಕಾಲಾವಕಾಶ ಕೇಳಿದ್ದಾರೆ. ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿರುವುದಾಗಿ ಅವರು ಸ್ಪಷ್ಟಪಡಿಸಿದರು. 
ದಿನೇಶ್ ಗುಂಡೂರಾವ್ ಮಾತನಾಡಿ, ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಕೆಲಸವನ್ನೇ ಅತೃಪ್ತರು ಮಾಡಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿ ಬೇರೆ ಪಕ್ಷ ಸೇರುವ ಪ್ರಯತ್ನ ಮಾಡುವ ಮೂಲಕ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹಣ, ಅಧಿಕಾರದ ದುರಾಸೆಯಿಂದ ಪಕ್ಷಕ್ಕೆ ದ್ರೋಹ ಎಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತ. ಸ್ಪೀಕರ್ ತ್ವರಿತವಾಗಿ ಅವರ ಶಾಸಕತ್ವ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದೇವೆ. ಪಕ್ಷದ್ರೋಹಿ ಶಾಸಕರಿಗೆ ಶಿಕ್ಷೆಯಾಗಬೇಕು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com