ಬಿಎಸ್‌ವೈ ವಿಶ್ವಾಸಮತ ಯಾಚನೆಗಿರುವ ಕಾನೂನಾತ್ಮಕ ತೊಡಕುಗಳ ಬಗ್ಗೆ ಕೈ ನಾಯಕರಿಂದ ಸುದೀರ್ಘ ಚರ್ಚೆ

ಪಕ್ಷ ಸಂಘಟನೆ, ರಾಜೀನಾಮೆ ಸಲ್ಲಿಸಿದ ಶಾಸಕರನ್ನು ಅನರ್ಹಗೊಳಿಸುವುದು, ಬಿಎಸ್ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮತ್ತೊಮ್ಮೆ ವಿಶ್ವಾಸಮತ...
ಕಾಂಗ್ರೆಸ್ ನಾಯಕರ ಸಭೆ
ಕಾಂಗ್ರೆಸ್ ನಾಯಕರ ಸಭೆ
ಬೆಂಗಳೂರು: ಪಕ್ಷ ಸಂಘಟನೆ, ರಾಜೀನಾಮೆ ಸಲ್ಲಿಸಿದ ಶಾಸಕರನ್ನು ಅನರ್ಹಗೊಳಿಸುವುದು, ಬಿಎಸ್ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮತ್ತೊಮ್ಮೆ ವಿಶ್ವಾಸಮತ ಯಾಚಿಸಲು ಇರುವ ಕಾನೂನಾತ್ಮಕ ಹಾಗೂ ತಾಂತ್ರಿಕ ಅಂಶಗಳು, ಜೆಡಿಎಸ್‌ನೊಂದಿಗೆ ಮೈತ್ರಿ ಮುನ್ನಡೆಸಬೇಕೇ ಬೇಡವೇ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬುಧವಾರ ಕಾಂಗ್ರೆಸ್ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ, ಈಶ್ವರ್ ಖಂಡ್ರೆ, ಎಚ್‌.ಕೆ.ಪಾಟೀಲ್, ಎಸ್‌.ಆರ್. ಪಾಟೀಲ್, ನಸೀರ್ ಅಹ್ಮದ್ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಒಂದು ಬಾರಿ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಪಡಿಸಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಅವರಿಗೆ ವಿಶ್ವಾಸಮತ ಯಾಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗದೇ ಇರುವುದರಿಂದ ವಿಧಾನಸಭೆಯ ಒಟ್ಟು ಸದಸ್ಯ ಬಲ 224 ಇದೆ. ಈ ವೇಳೆ ಕೇವಲ 105 ಮತಗಳನ್ನು ಬಹುಮತ ಎಂದು ಪರಿಗಣಿಸಲು ಆಗುವುದಿಲ್ಲ. ಬಹುಮತ ಸಾಬೀತಿಗೆ ಬಿಜೆಪಿಗೆ 113 ಸಂಖ್ಯಾ ಬಲ ಇರಬೇಕಾಗುತ್ತದೆ. ಆದರೆ ಬಿಜೆಪಿ ಪಾಳಯದಲ್ಲಿ ಕೇವಲ 105 ಸದಸ್ಯರನ್ನು ಇಟ್ಟುಕೊಂಡು ಬಹುಮತ ಎಂದು ಹೇಳಲಾಗುವುದಿಲ್ಲ. ಈ ತಾಂತ್ರಿಕ ವಿಷಯವನ್ನು ಮುಂದಿಟ್ಟು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಅತೃಪ್ತ ಶಾಸಕರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಅವರನ್ನು ಪಕ್ಷದಿಂದ ಅನರ್ಹಗೊಳಿಸುವುದು ಮಾತ್ರವಲ್ಲ ಮುಂದೆ ಅವರ ರಾಜಕೀಯ ಭವಿಷ್ಯಕ್ಕೆ ಕೊಡಲಿ ಏಟು ಹಾಕುವ ಬಗ್ಗೆಯೂ ಚರ್ಚಿಸಲಾಗಿದೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಮುಂದೆ ಇಂತಹ ವಿಶ್ವಾಸದ್ರೋಹವೆಸಗುವವರಿಗೆ ತಕ್ಕ ಪಾಠವಾಗುವ ರೀತಿಯಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಶಕ್ತಿ ತುಂಬಲು ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.
ಕೆಪಿಸಿಸಿಯ ಎಲ್ಲಾ ಘಟಕಗಳನ್ನು ವಿಸರ್ಜಿಸಿರುವ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ನೇಮಕ, ವಿವಿಧ ಘಟಕಗಳ ಅಧ್ಯಕ್ಷರು ,ಜಿಲ್ಲೆ , ತಾಲೂಕು , ಬ್ಲಾಕ್ ಹಾಗೂ ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಿಸಿ ಪಕ್ಷವನ್ನು ಮತ್ತಷ್ಟು ಸಂಘಟನಾತ್ಮಕವಾಗಿ ಬಲಗೊಳಿಸಲು ಇಂದಿನ ಸಭೆಯಲ್ಲ ತೀರ್ಮಾನಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸರ್ಕಾರದ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರ ಬಗ್ಗೆ ಕ್ರಮ ಆಗಲೇಬೇಕು. ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಸಭೆಯಲ್ಲಿ ತೀರ್ಮಾನವಾಗಿದೆ ಎಂದರು.
ಅತೃಪ್ತ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರಿಗೆ ಮುಂದೆ ಪಾಠವಾಗಬೇಕು. ಬಿಜೆಪಿಯವರು ಬಹುಮತ ತೋರಿಸಬೇಕಿದೆ, ಅದನ್ನು ನಾವು ಕಾದು ನೋಡುತ್ತೇವೆ ಎಂದರು.
ಪಕ್ಷ ಸಂಘಟನೆ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ನಾಯಕರೆಲ್ಲರೂ ಐಕ್ಯತೆಯಿಂದ ಮುನ್ನಡೆಯುವ ಬಗ್ಗೆ ಚರ್ಚೆಯಾಗಿದೆ. ಜೆಡಿಎಸ್‌ನೊಂದಿಗಿನ ಮೈತ್ರಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು. ಅಲ್ಲದೆ ಪ್ರತಿಪಕ್ಷ ನಾಯಕ ಸ್ಥಾನದ ಬಗ್ಗೆಯೂ ಚರ್ಚೆಯಾಗಿಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com