ಬೆಳಗಾವಿಗೆ 4 ಸಚಿವ ಸ್ಥಾನ ನೀಡಬೇಕು: ಕೇಂದ್ರ ಸಚಿವ ಸುರೇಶ್ ಅಂಗಡಿ ಒತ್ತಾಯ

ದೋಸ್ತಿ ಸರ್ಕಾರದ 14 ತಿಂಗಳ ಆಡಳಿತಕ್ಕೆ ಜನರು ಬೇಸತ್ತಿದ್ದು, ಭಗವಂತನ ಕೃಪೆಯಿಂದ ಮತ್ತೊಮ್ಮೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಆಗಿದೆ...
ಸುರೇಶ್ ಅಂಗಡಿ
ಸುರೇಶ್ ಅಂಗಡಿ
ಬೆಳಗಾವಿ: ದೋಸ್ತಿ ಸರ್ಕಾರದ 14 ತಿಂಗಳ ಆಡಳಿತಕ್ಕೆ ಜನರು ಬೇಸತ್ತಿದ್ದು, ಭಗವಂತನ ಕೃಪೆಯಿಂದ ಮತ್ತೊಮ್ಮೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಆಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಸಂತಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಉತ್ತಮ ಆಡಳಿತ ನೀಡಲು ಸೂಚಿಸಿದ್ದು, ಮುಂಬರುವ ದಿನಗಳಲ್ಲಿ ರೈತ, ಬಡವರ ಪರ, ಜನಸಾಮಾನ್ಯರಿಗೆ ಅನುಕೂಲವಾಗುವ ಸರ್ಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸದನದಲ್ಲಿ ಯಡಿಯೂರಪ್ಪ ಅವರು ವಿಶ್ವಾಸ ಮತಯಾಚನೆ ಮಾಡಲಿದ್ದು, ಬಿಜೆಪಿ ಪಕ್ಷಕ್ಕೆ ವಿಶ್ವಾಸಮತ ಗೆಲ್ಲುವ ವಿಶ್ವಾಸವಿದ್ದು, ಮುಂದೆ ಏನಾಗಲಿದೆ ಎಂಬುದು ಸದನದಲ್ಲಿ ಸಾಬೀತಾಗಲಿದೆ ಎಂದರು.
ಸ್ಪೀಕರ್ ರಮೇಶ ಕುಮಾರ್ ಯಾರದೋ ಒತ್ತಡದಲ್ಲಿ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಅವರು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಭಗವಂತ ಅವರಿಗೆ ಶಕ್ತಿ ನೀಡಲಿ ಎಂದು ವ್ಯಂಗ್ಯವಾಡಿದರು.
ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ‌ ನೀಡುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತಮ ಆಡಳಿತ ನೀಡುವ ಸಂದರ್ಭದಲ್ಲಿ ಯಾವುದೇ ಪಕ್ಷ ಬಾಹ್ಯ ಬೆಂಬಲ ಸೂಚಿಸಿದರೂ, ಅದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ನಾವು ಯಾರಿಂದಲೂ ಬಾಹ್ಯ ಬೆಂಬಲದ ಅಪೇಕ್ಷೆ ಹೊಂದಿಲ್ಲ. ಜೆಡಿಎಸ್ ಬಾಹ್ಯ ಬೆಂಬಲ ನೀಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಬಿಜೆಪಿಗೆ ಜನರ ಆಶೀರ್ವಾದ ಇದೆ ಎಂದು ತಿಳಿಸಿದರು.
ಜೆಡಿಎಸ್ ಬೆಂಬಲವನ್ನು ಸ್ವೀಕರಿಸಬೇಕಾ? ಬೇಡವಾ? ಎಂಬುದನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಳೆ ತೀರ್ಮಾನ ಮಾಡುತ್ತಾರೆ. ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು 4 ಸಚಿವ ಸ್ಥಾನ ನೀಡಬೇಕು. ಇದು 18 ಜನ ಶಾಸಕರು ಇರುವ ಜಿಲ್ಲೆ . ಹೀಗಾಗಿ ಕನಿಷ್ಠ 4 ಜನರಿಗಾದರೂ ಮಂತ್ರಿ ಸ್ಥಾನ ನೀಡಬೇಕು ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com