4ನೇ ಬಾರಿ ಮುಖ್ಯಮಂತ್ರಿ ಪಟ್ಟ; ಅದೃಷ್ಟ ತಂದುಕೊಡುವುದೇ ಬಿಎಸ್ ವೈಗೆ?

ಕರ್ನಾಟಕದ ರಾಜಭವನದ ಗಾಜಿನ ಮನೆಯಲ್ಲಿ ನಿನ್ನೆ ಬಿಗ್ ಬಜೆಟ್ ಸಿನಿಮಾ ಬಿಡುಗಡೆಯಾಗಿ ಮೊದಲ ದಿನದ ಮೊದಲ ಶೋನಂತೆ ಇತ್ತು ವಾತಾವರಣ...
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಕರ್ನಾಟಕದ ರಾಜಭವನದ ಗಾಜಿನ ಮನೆಯಲ್ಲಿ ನಿನ್ನೆ ಬಿಗ್ ಬಜೆಟ್ ಸಿನಿಮಾ ಬಿಡುಗಡೆಯಾಗಿ ಮೊದಲ ದಿನದ ಮೊದಲ ಶೋನಂತೆ ಇತ್ತು ವಾತಾವರಣ. ನಾಲ್ಕನೇ ಬಾರಿಗೆ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ರಾಜಭವನದ ಒಳಗೆ ಮತ್ತು ಹೊರಗೆ ಬಿಎಸ್ ವೈ, ಬಿಎಸ್ ವೈ ಎಂಬ ಘೋಷಣೆ ನಾಲ್ಕೂ ದಿಕ್ಕುಗಳಿಂದ ಅನುರಣಿಸುತ್ತಿತ್ತು.
ಬಿ ಎಸ್ ಯಡಿಯೂರಪ್ಪ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಿನಿಮಾ ಥಿಯೇಟರ್ ನಲ್ಲಿ ಎದುರಿಗೆ ಬಿಳಿ ಪರದೆ ಮೇಲೆ ನಾಯಕನ ಎಂಟ್ರಿಯಾಗುವಾಗ ಜೋರಾದ ಚಪ್ಪಾಳೆ, ಶಿಳ್ಳೆಗಳು ಕೇಳಿಬರುವಂತೆ ಯಡಿಯೂರಪ್ಪನವರು ಬಿಳಿ ಸಫಾರಿ ಸೂಟ್ ಮತ್ತು ಹಸಿರು ಶಾಲು ಧರಿಸಿ ರೈತಪರ ಎಂಬ ಇಮೇಜ್ ಸಾರುವಂತೆ ಪ್ರಮಾಣವಚನ ಸ್ವೀಕರಿಸಲು ಬಿ ಎಸ್ ಯಡಿಯೂರಪ್ಪನವರು ವೇದಿಕೆಗೆ ಹತ್ತುತ್ತಿದ್ದಂತೆ ಜೋರು ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು. 
ಯಡಿಯೂರಪ್ಪನವರು ದೇವರ ಹೆಸರಿನಲ್ಲಿ ನಿನ್ನೆ ಸಂಜೆ 6.30ಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಸಂಜೆ 5 ಗಂಟೆ ಹೊತ್ತಿಗೇ ಯಡಿಯೂರಪ್ಪ ಅಭಿಮಾನಿಗಳು ರಾಜಭವನ ಕಡೆಗೆ ಬರಲಾರಂಭಿಸಿದರು. ಹೊರಗೆ ರಸ್ತೆಯಲ್ಲಿ ಪಟಾಕಿ ಸಿಡಿಸುವುದು, ಸಿಹಿತಿಂಡಿ ಹಂಚುವುದು, ಮೆರವಣಿಗೆಯಲ್ಲಿ ಕಲಾವಿದರು ಬಂದು ಕುಣಿಯುವುದು, ಹಾರ, ತುರಾಯಿ ಸಂಭ್ರಮ ಕಂಡುಬಂತು. ಅಲ್ಲಲ್ಲಿ ಅಭಿಮಾನಿಗಳು ಮೋದಿ ಮತ್ತು ಅಮಿತ್ ಶಾ ಹೆಸರುಗಳನ್ನು ಸಹ ಕೂಗುತ್ತಿದ್ದರು. ಹಲವರು ಕೇಸರಿ ಶಾಲು ಹೊದ್ದುಕೊಂಡು ಬಂದು ಗಾಜಿನ ಮನೆಯ ಸಂಭ್ರಮವನ್ನು ಸವಿಯಲು ಲೋಹದ ಕಂಬದ ಮೇಲೆ ನಿಂತು ಇಣುಕುತ್ತಿದ್ದರು.
ಈ ಹೊತ್ತಿಗೆ ಸರಿಯಾಗಿ ಕಾಂಗ್ರೆಸ್ ನ ಬಂಡಾಯ ಶಾಸಕ ರೋಶನ್ ಬೇಗ್ ಆಗಮಿಸಿದರು. ಆಗ ಅಭಿಮಾನಿಗಳ ಹರ್ಷೋದ್ಗಾರ ಇನ್ನೂ ಮುಗಿಲುಮುಟ್ಟಿತ್ತು. ಗಾಜಿನ ಮನೆಯೊಳಗೆ ಎದುರು ಸೀಟಿನಲ್ಲಿ ವಿರಾಜಮಾನರಾಗಿದ್ದ ಬಿಜೆಪಿ ನಾಯಕರು ಎದ್ದುನಿಂತು ರೋಶನ್ ಬೇಗ್ ಅವರನ್ನು ಸ್ವಾಗತಿಸಿದರು. ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಡ ಆಗಾಗ ಕೇಳಿಬರುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com