ಸಂಸದರಾದ ಹುರುಪಿನಲ್ಲಿ ಟೊಂಕಕಟ್ಟಿ ಕೆಲಸ ಮಾಡುತ್ತಿರುವ ಡಾ. ಉಮೇಶ್ ಜಾಧವ್

ಕಾಂಗ್ರೆಸ್ ನಿಂದ ಬಂಡಾಯವೆದ್ದು ಬಿಜೆಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆದು ಹಿರಿಯ ...

Published: 13th June 2019 12:00 PM  |   Last Updated: 13th June 2019 05:37 AM   |  A+A-


Dr Umesh Jadav

ಡಾ ಉಮೇಶ್ ಜಾಧವ್

Posted By : SUD SUD
Source : Online Desk
ಕಲಬುರಗಿ: ಕಾಂಗ್ರೆಸ್ ನಿಂದ ಬಂಡಾಯವೆದ್ದು ಬಿಜೆಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿ ಡಾ. ಉಮೇಶ್ ಜಾಧವ್ ಗುಲ್ಬರ್ಗ ಸಂಸದರಾಗಿ ದೆಹಲಿ ಪ್ರವೇಶಿಸಿದ್ದು ಈಗ ಹಳೆಯ ವಿಷಯ.

ಕಳೆದ ತಿಂಗಳು ಸಂಸದರಾಗಿ ಚುನಾವಣೆಯಲ್ಲಿ ಆರಿಸಿ ಬಂದ ನಂತರ ರಾಜ್ಯ ರೈಲ್ವೆ ಖಾತೆ ಸಚಿವರನ್ನು ಭೇಟಿ ಮಾಡಿ ಕಲಬುರಗಿಯಲ್ಲಿ ರೈಲ್ವೆವಿಭಾಗದ ಸ್ಥಾಪನೆ ಕೆಲಸವನ್ನು ಪೂರ್ಣಗೊಳಿಸಬೇಕೆಂದು ಕೋರಿದ್ದಾರೆ. ಇತ್ತೀಚೆಗೆ ತಾನು ವೃತ್ತಿಯಿಂದ ವೈದ್ಯ ಎಂದು ರೋಗಿಗಳಿಗೆ ಪರಿಚಯ ಮಾಡಿಕೊಂಡು ಇಎಸ್ ಐಸಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.
 
ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ಕೊಟ್ಟು ಇಲ್ಲಿಗೆ ಹೆಚ್ಚಿನ ಅನುದಾನ ಕೊಡಿಸಲು ಕೇಂದ್ರ ಸರ್ಕಾರದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅಳಂದ ತಾಲ್ಲೂಕಿನ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಅಗತ್ಯಗಳನ್ನು ಮನಗಂಡು ಕುಡಿಯುವ ನೀರನ್ನು ಒದಗಿಸುವ ಭರವಸೆ ಕೊಟ್ಟಿದ್ದಾರೆ. ಸಂಸದರಾದ ಬಳಿಕ ಡಾ ಉಮೇಶ್ ಜಾಧವ್ ಒಂದು ನಿಮಿಷವೂ ಸುಮ್ಮನೆ ಕೂರದೆ ಕೆಲಸ ಮಾಡುತ್ತಿದ್ದಾರೆ. ಗುಲ್ಬರ್ಗ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳಲ್ಲಿ ಜನಸಂಪರ್ಕ ಸಭೆಗಳನ್ನು ಪ್ರತಿ ತಿಂಗಳು ನಡೆಸಲು ನಿರ್ಧರಿಸಿದ್ದಾರೆ. 

2013ರ ವಿಧಾನಸಭೆ ಚುನಾವಣೆಗೆ ಮೊದಲು ಉಮೇಶ್ ಜಾಧವ್ ಅವರ ಜೀವನಶೈಲಿ ಸಂಪೂರ್ಣ ವಿಭಿನ್ನವಾಗಿತ್ತು. ದೆಹಲಿಯ ಕಾರ್ಮಿಕ ಇಲಾಖೆ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದರು. ಆಗ ತಾನು ಮುಂದೊಂದು ದಿನ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸುತ್ತೇನೆ, ಗುಲ್ಬರ್ಗದ ಸಂಸದನಾಗುತ್ತೇನೆ ಎಂದು ಕನಸು ಮನಸಿನಲ್ಲಿ ಕೂಡ ಅವರು ಎಣಿಸಿರಲಿಕ್ಕಿಲ್ಲ. 

ಮಾಜಿ ಮುಖ್ಯಮಂತ್ರಿ ದಿವಂಗತ ಧರಂ ಸಿಂಗ್ ಅವರು ಮೊದಲ ಬಾರಿಗೆ ಉಮೇಶ್ ಜಾಧವ್ ಅವರ ಮನಸ್ಸಿನಲ್ಲಿ ರಾಜಕೀಯದ ಬೀಜ ಬಿತ್ತಿದವರು. ಅಂದಿನ ಚಿಂಚೋಳಿ ಕ್ಷೇತ್ರದ ಬಿಜೆಪಿ ಶಾಸಕ ವಡ್ಡಾರ ಸಮುದಾಯದ ಸುನಿಲ್ ವಲ್ಯಾಪುರೆ ಅವರನ್ನು ಸೋಲಿಸಲು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದರು ಧರಂ ಸಿಂಗ್ ಮತ್ತು ಖರ್ಗೆಯವರು. 

ಉಮೇಶ್ ಜಾಧವ್ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ್ ಜಾಧವ್. ಧರಂ ಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ಚಿರಪರಿಚಿತ. ಚಿಂಚೋಳಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಮತಗಳನ್ನು ಸೆಳೆಯಲು ರಾಜಕೀಯಕ್ಕೆ ಸೇರುವಂತೆ ಜಾಧವ್ ಅವರಿಗೆ ಇವರಿಬ್ಬರು ಒತ್ತಾಯಿಸಿದ್ದರು.

ಚಿಂಚೋಳಿಯ ತಾಂಡಾ ಕ್ಷೇತ್ರದ ಬೆಡ್ಸೂರ್ ನವರಾದ ಉಮೇಶ್ ಜಾಧವ್ ವೈದ್ಯಕೀಯ ವೃತ್ತಿಗೆ ಸ್ವಇಚ್ಛೆಯಿಂದ ನಿವೃತ್ತಿ ಪಡೆದು ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದು ಬಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ ಅವರನ್ನು ನೇಮಿಸಲಾಯಿತು. 2018ರ ಚುನಾವಣೆಯಲ್ಲಿ ಮತ್ತೆ ಚಿಂಚೋಳಿಯಿಂದ ಗೆದ್ದುಬಂದರು. ಅಲ್ಲಿಂದ ಅವರಿಗೆ ಸಚಿವರಾಗುವ ಆಸೆ ಚಿಗುರೊಡೆಯಿತು.

ಆದರೆ ಕಳೆದ ವರ್ಷ ರಾಜ್ಯ ಮೈತ್ರಿ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲವೆಂದು ಅಸಮಾಧಾನಗೊಂಡು, ಚಿಂಚೋಳಿ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳು, ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆಯವರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಭಾವಿಸಿ ಬಂಡಾಯವೆದ್ದು ಬದಲಿ ದಾರಿ ಹುಡುಕುತ್ತಿದ್ದರು. ಇದೇ ಹೊತ್ತಿಗೆ ಭಾರತೀಯ ಜನತಾ ಪಾರ್ಟಿಯಿಂದ ಜಾಧವ್ ಗೆ ಆಫರ್ ಸಿಕ್ಕಿತು. ಚಿಂಚೋಳಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರೆ ಅವರ ಪುತ್ರ ಅವಿನಾಶ್ ಜಾಧವ್ ಗೆ ಟಿಕೆಟ್ ಕೊಡಿಸುವುದಾಗಿ ಬಿಜೆಪಿ ಹೈಕಮಾಂಡ್ ನಿಂದಲೇ ವಾಗ್ದಾನ ಸಿಕ್ಕಿತು. ಕೂಡಲೇ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ತಮ್ಮನ್ನು ರಾಜಕೀಯಕ್ಕೆ ಕರೆತಂದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧವೇ ಸ್ಪರ್ಧಿಸಿ ಗೆದ್ದುಬಂದರು. ಇತ್ತ ಅವರ ಪುತ್ರರೂ ಚಿಂಚೋಳಿ ಶಾಸಕರಾದರು.

ಬಂಜಾರ ಸಮುದಾಯದ ನಾಯಕ: ತಾಂಡಾ ನೆಲೆಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಉಮೇಶ್ ಜಾಧವ್ ಅವರು ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದಾಗ ಮಾಡಿರುವ ಕೆಲಸಗಳು ಅವರಿಗೆ ವರವಾಗಿವೆ. ಇಡೀ ಬಂಜಾರ ಸಮುದಾಯ ಅವರ ಬೆನ್ನಿಗೆ ನಿಂತಿತು. ಈ ಬಾರಿ ಗುಲ್ಬರ್ಗದಿಂದ ಗೆದ್ದು ಬರಲು ಅವರಿಗೆ ಬಿಜೆಪಿ ನಾಯಕರುಗಳು ಕೂಡ ಸಾಕಷ್ಟು ಸಹಾಯ ಮಾಡಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp