ನಾನು ಸತ್ತ ನಂತರವೂ ಜೆಡಿಎಸ್ ಪಕ್ಷ ಬೆಳೆಯಬೇಕು, ಅದಕ್ಕೆ ನಾನು ವೇದಿಕೆ ಸಿದ್ದಪಡಿಸುತ್ತಿದ್ದೇನೆ: ಹೆಚ್ ಡಿ ದೇವೇಗೌಡ

ಮೈತ್ರಿಕೂಟದಲ್ಲಿ ಉನ್ನತ ಮಟ್ಟದ ನಾಯಕರಲ್ಲಿ ಒಗ್ಗಟ್ಟಿನ ಕೊರತೆಯಿದೆ, ಹೊಂದಾಣಿಕೆ ಇಲ್ಲ ಎಂದು ಮಾಜಿ ಪ್ರಧಾನಿ ...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
ಬೆಂಗಳೂರು: ಮೈತ್ರಿಕೂಟದಲ್ಲಿ ಉನ್ನತ ಮಟ್ಟದ ನಾಯಕರಲ್ಲಿ ಒಗ್ಗಟ್ಟಿನ ಕೊರತೆಯಿದೆ, ಹೊಂದಾಣಿಕೆ ಇಲ್ಲ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರು ಅಸಮಾಧಾನಗೊಂಡಿದ್ದು ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಒಟ್ಟಿಗೆ ಸೋದರರಂತೆ ಹೊಂದಿಕೊಂಡು ಕೆಲಸ ಮಾಡಿದರೆ ಸರ್ಕಾರ ಸುಗಮವಾಗಿ ಮುನ್ನಡೆದುಕೊಂಡು ಹೋಗುತ್ತದೆ,ನಾನಿದರಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.
ಕಳೆದೊಂದು ವರ್ಷದಿಂದ ಮೈತ್ರಿಕೂಟಗಳಲ್ಲಿ ಉನ್ನತ ನಾಯಕರ ಮಧ್ಯೆ ಹೊಂದಾಣಿಕೆಯಿರಲಿಲ್ಲ, ಇನ್ನು ಮುಂದಾದರೂ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಟ್ಟಾಗಿ ಸರ್ಕಾರ ಮುಂದುವರಿಸಿಕೊಂಡು ಹೋಗಲಿ ಎಂದು ದೇವೇಗೌಡರು ಹೇಳಿದರು, ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. 
-ಇಂದು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ್ದೀರಿ.
ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಮೊದಲು ಪ್ರಸ್ತಾಪಿಸಿದ್ದು ಮೇಡಂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು. ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಇತರರು ಬೆಂಗಳೂರಿಗೆ ನನ್ನ ಬಳಿ ಬಂದು ಮಾತುಕತೆ ನಡೆಸಿದರು. ಕೊನೆಯದಾಗಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು. ಸರ್ಕಾರ ಪೂರ್ಣಾವಧಿ ಮುಗಿಯುವವರೆಗೆ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಕಳೆದ ಒಂದು ವರ್ಷದಿಂದ ಒಗ್ಗಟ್ಟು ಎಂಬುದು ಮೂಡಲೇ ಇಲ್ಲ. ಇನ್ನು ಮುಂದಾದರೂ ಎಲ್ಲರೂ ಸಹಕಾರದಿಂದ ಒಗ್ಗಟ್ಟಿನಿಂದ ಹೋಗಲಿ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಅವರು ಜಾರಿಗೆ ತಂದಿದ್ದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬುದು ಅವರ ಷರತ್ತಾಗಿದೆ.
ಕುಮಾರಸ್ವಾಮಿಯವರು ರೈತರ ಸಾಲಮನ್ನಾ ಘೋಷಿಸಿದಾಗ ಅದನ್ನು ಕಾಂಗ್ರೆಸ್ ನವರು ಒಪ್ಪಿಕೊಂಡರು. ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಎಲ್ಲವೂ ಸರಿಯಾಗಿ ಹೋಗುತ್ತಿದೆ. ಬಿಜೆಪಿಯವರಿಗೆ ಟೀಕಿಸಲು ಅವಕಾಶ ನೀಡದೆ ಇನ್ನು ನಾಲ್ಕು ವರ್ಷ ಚೆನ್ನಾಗಿ ನಡೆದುಕೊಂಡು ಹೋಗಲಿ, ಈಗ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಒಂದು ತೀರ್ಮಾನಕ್ಕೆ ಬರಬೇಕು. ಬೇರೆಯವರು ಈ ವಿಷಯದಲ್ಲಿ ಮೂಗು ತೂರಿಸಬಾರದು. ನಾನು ನನ್ನ ಪಕ್ಷದ ಮತ್ತು ಹಿರಿಯ ನಾಯಕರ ಕ್ಷೇಮ ನೋಡಿಕೊಳ್ಳುತ್ತೇನೆ, ಸಿದ್ದರಾಮಯ್ಯನವರು ಕಾಂಗ್ರೆಸ್ ನ ಕ್ಷೇಮ ನೋಡಿಕೊಳ್ಳಲಿ.
ನೀವು ಇತ್ತೀಚೆಗೆ ರಾಹುಲ್ ಗಾಂಧಿ ಭೇಟಿ ಮಾಡಿ ಏನು ಚರ್ಚೆ ಮಾಡಿದ್ದೀರಿ?
-ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ ಎಂದು ಕೇಳಿಕೊಳ್ಳಲು ನಾನು ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೆ. ಮತ್ತೊಂದು ವಿಷಯ ಸಚಿವ ಸಂಪುಟ ಭರ್ತಿ ಬಗ್ಗೆ ಮಾತನಾಡಿದ್ದೆ. ಕುಮಾರಸ್ವಾಮಿಯವರ ಯೋಚನೆ ಬೇರೆಯದಾಗಿದೆ. ಒಬ್ಬ ಮುಸ್ಲಿಂ ಮತ್ತು ಒಬ್ಬ ದಲಿತರಿಗೆ ಸಚಿವ ಹುದ್ದೆ ನೀಡಬೇಕೆಂದು ನಾನು ಹೇಳಿದ್ದೆ. ಆದರೆ ಕಾಂಗ್ರೆಸ್ ನಲ್ಲಿನ ಪರಿಸ್ಥಿತಿ ಮತ್ತು ಸಿದ್ದರಾಮಯ್ಯ ಸಲಹೆ ಮೇರೆಗೆ ಇಬ್ಬರು ಸ್ವತಂತ್ರ ಶಾಸಕರಿಗೆ ಸಚಿವ ಹುದ್ದೆ ನೀಡಲಾಯಿತು. 
ನಾನು ಯಾರನ್ನೂ ಈ ವಿಚಾರದಲ್ಲಿ ದೂರುವುದಿಲ್ಲ.ಇನ್ನು ಮುಂದಾದರೂ ಒಗ್ಗಟ್ಟಿನಿಂದ ಸರ್ಕಾರ ನಡೆಸಿಕೊಂಡು ಹೋಗಲಿ, ಯಾವುದೇ ಭಿನ್ನಾ ಭಿಪ್ರಾಯಗಳಿಲ್ಲದೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅಣ್ಣ-ತಮ್ಮಂದಿರಂತೆ ಸರ್ಕಾರ ಮುಂದುವರಿಸಿಕೊಂಡು ಹೋಗಲಿ ಎಂಬುದೇ ನನ್ನಾಸೆ. ಮೊದಲ ದಿನದಿಂದಲೇ ಬಿಜೆಪಿಯದ್ದು ಒಂದೇ ಉದ್ದೇಶ, ಅದು ಸರ್ಕಾರವನ್ನು ಬೀಳಿಸುವುದು. ಆಪರೇಷನ್ ಕಮಲ ಇನ್ನೂ ಮುಂದುವರಿದಿದೆ.
ನಿಮ್ಮ ಕಳಕಳಿ, ಕಾಳಜಿಯೇನು?
-ಪಕ್ಷವನ್ನು ಬಲಪಡಿಸುವುದು ನನ್ನ ಕಾಳಜಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲು, ಬಿಜೆಪಿ ನಂತರ ಮತ್ತು ಜೆಡಿಎಸ್ ಮೂರನೇ ಸ್ಥಾನ ಪಡೆದುಕೊಂಡಿದೆ. ಸ್ವತಂತ್ರ ಶಾಸಕರು ನನ್ನ ಶಕ್ತಿಗೆ ಸಮಾನರು. ಅವರು ಜೆಡಿಎಸ್ ನಿಂದ ಏಕೆ ಸ್ಪರ್ಧಿಸಬಾರದು? ಅವರು ಗೆದ್ದು ಬರಲಿಕ್ಕಿಲ್ಲ ಎಂಬ ಭಯವಿದೆ ಎಂದು ಕೆಲವರು ಹೇಳಿದರು. ಈ ಎಲ್ಲಾ ವಿಚಾರ ಬಿಟ್ಟು ನೀನು ರಾಜ್ಯದ ಜನತೆಗಾಗಿ ಕೆಲಸ ಮಾಡು, ತಳಮಟ್ಟದಿಂದ ನಾನು ಪಕ್ಷವನ್ನು ಕಟ್ಟುತ್ತೇನೆ ಎಂದು ಕುಮಾರಸ್ವಾಮಿಗೆ ಹೇಳಿದ್ದೇನೆ. ಕಾಂಗ್ರೆಸ್ ಬಲಪಡಿಸುವುದು ಸಿದ್ದರಾಮಯ್ಯ ಜವಾಬ್ದಾರಿ. ನಮ್ಮ ನಮ್ಮ ಹೇಳಿಕೆಗಳಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಹಾನಿಯುಂಟಾಗಬಾರದು.
ಲೋಕಸಭಾ ಚುನಾವಣೆ ಫಲಿತಾಂಶ ವಿಶ್ಲೇಷಿಸಲು ಕಾಂಗ್ರೆಸ್ ಸಮಿತಿಯನ್ನು ರಚಿಸಿದೆ, ನೀವು ಕೂಡ ಅದೇ ರೀತಿ ಮಾಡುತ್ತೀರಾ?
ನಾನು ಜೆಡಿಎಸ್ ನ ರಾಜ್ಯಾಧ್ಯಕ್ಷನಾಗಿ ಮೂರು ಸಲ ಆಗಿದ್ದೆ. ಆದರೆ ಚುನಾವಣೆಯಲ್ಲಿ ಸೋತಾಗ ಯಾವುದೇ ಸಮಿತಿ ರಚಿಸಿರಲಿಲ್ಲ.
ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ವಿಶ್ವಾಸಾತ್ಮಕವಾಗಿದೆಯೇ?
ನಾನು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರ ಪಕ್ಷವನ್ನು ಬಲಪಡಿಸಲು ಅವರು ಆ ರೀತಿ ಮಾಡುತ್ತಾರೆ. ಮಾಡಿಕೊಳ್ಳಲಿ, ಅದರಲ್ಲಿ ಯಾವುದೇ ತಪ್ಪು ಇಲ್ಲ.
ಪಕ್ಷ ಕಟ್ಟುವ ಕೆಲಸದಲ್ಲಿ ಈಗಾಗಲೇ ತೊಡಗಿದ್ದೀರಾ?
-ತಳಮಟ್ಟದಿಂದ ನಾನು ಪಕ್ಷ ಕಟ್ಟಿದ್ದೇನೆ. ಬಲಿಷ್ಠ ಸ್ಥಳೀಯ ಪಕ್ಷ ಕಟ್ಟುವ ನನ್ನ ಆಸೆಯನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. 58 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಹಾಗಿರುವಾಗ ಈಗ ಸುಮ್ಮನೆ ಕುಳಿತುಕೊಳ್ಳಲು ಹೇಗೆ ಸಾಧ್ಯ? ನನ್ನ ಪಕ್ಷ ನನಗೆ ನನ್ನ ತಾಯಿ ಇದ್ದ ಹಾಗೆ. ಅದನ್ನು ನಾನು ಕಟ್ಟುತ್ತೇನೆ. 
ನಾನು ನನ್ನ ಪಕ್ಷವನ್ನು ಕಟ್ಟಿ ಬೆಳೆಸಲು ಯೋಚಿಸುತ್ತೇನೆಯೇ ಹೊರತು ಮೈತ್ರಿ ಸರ್ಕಾರಕ್ಕೆ ಹಾನಿಯುಂಟುಮಾಡುವುದಿಲ್ಲ. ನಮ್ಮದು ಚಿಕ್ಕ ಪಕ್ಷ. ಆದರೆ ನಾನು ಸತ್ತ ನಂತರವೂ ಈ ಪಕ್ಷ ಬೆಳೆಯಬೇಕು. ಅದಕ್ಕೆ ನಾನು ವೇದಿಕೆ ಸಿದ್ದಪಡಿಸುತ್ತಿದ್ದೇನೆ. ಕೆಲವರು ಹೇಳುತ್ತಾರೆ, ದೇವೇಗೌಡರು ಸತ್ತ ನಂತರ ಜೆಡಿಎಸ್ ಪಕ್ಷ ಕೂಡ ಸಾಯುತ್ತದೆ, ಆದರೆ ನಮ್ಮ ಪಕ್ಷ ಜನರ ಆಶೀರ್ವಾದದಿಂದ ಉಳಿಯುತ್ತದೆ.
ನಿಮ್ಮ ಪಕ್ಷದ ಅಧ್ಯಕ್ಷ ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯ ಬೆಳವಣಿಗೆ ಏನು?
ನಾವು ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?
ಅವರು ಅದನ್ನು ಎಲ್ಲಾ 30 ಜಿಲ್ಲೆಗಳಲ್ಲಿ ಮಾಡಿದರೆ ಒಳ್ಳೆಯದು. ಬೆಳಿಗ್ಗೆ 10 ಗಂಟೆಗೆ ಆರಂಭವಾಗುವುದರಿಂದ ಅದನ್ನು ಗ್ರಾಮ ವಾಸ್ತವ್ಯ ಎಂದು ಕರೆಯಲು ಬಯಸುವುದಿಲ್ಲ, ಬದಲಿಗೆ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಎನ್ನುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com