ಬಿ ಎಸ್ ಯಡಿಯೂರಪ್ಪ ಟೀಕೆ 'ಕೆಳಮಟ್ಟದ್ದು ಮತ್ತು ಅನಾರೋಗ್ಯಕರ': ಸಿಎಂ ಕುಮಾರಸ್ವಾಮಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ವಿರೋಧ ಪಕ್ಷಗಳ ಟೀಕೆಗಳು ಆರೋಗ್ಯಕರವಾಗಿಲ್ಲ ಮತ್ತು ತೀರಾ ಕೆಳಮಟ್ಟದ್ದಾಗಿವೆ ಎಂದು ಹೇಳಿದ್ದಾರೆ.
ನಿನ್ನೆ ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯ ಟೀಕಿಸಿ 10 ಪ್ರಶ್ನೆಗಳನ್ನು ಹೊತ್ತ ಬಿಜೆಪಿಯ ಕಿರು ಹೊತ್ತಿಗೆಯನ್ನು ಬಿ ಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, ಜನರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸಬೇಡಿ ಎಂದು ಹೇಳಿದ್ದಾರೆ. ಬರಗಾಲಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಕಂದಾಯ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿದಿನ ಸಭೆ ನಡೆಸುತ್ತಿದ್ದು ಜಿಲ್ಲಾ ಮಟ್ಟದಲ್ಲಿ ಹಣ ನೀಡಲಾಗುತ್ತದೆ ಎಂದು ಹೇಳಿದರು.
ಗ್ರಾಮ ವಾಸ್ತವ್ಯಕ್ಕೆ ಸಂಬಂಧಪಟ್ಟ ಟೀಕೆಗೆ ಉತ್ತರಿಸಿದ ಸಿಎಂ, ತಮ್ಮ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಲ್ಲಿಕೆಯಾದ ಅರ್ಜಿಗಳ ಪ್ರಗತಿಗೆ ಸಹಾಯವಾಣಿಯನ್ನು ತೆರೆಯಲಾಗಿದ್ದು ಅದರಡಿಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದರು.
ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಸಿಎಂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ರೈತರ ಆತ್ಮಹತ್ಯೆ ಶೇಕಡಾ 30ರಷ್ಟು ಕಡಿಮೆಯಾಗಿದೆ. ಆ ಸಂಖ್ಯೆಯನ್ನು ಶೂನ್ಯ ಮಟ್ಟಕ್ಕೆ ತರಬೇಕಾಗಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ನಾವು ಕಣ್ಮುಚ್ಚಿ ಕುಳಿತಿಲ್ಲ. ವಿಶೇಷ ತನಿಖಾ ತಂಡ ತನಿಖೆ ಮಾಡುತ್ತಿದ್ದು ಸಚಿವರು ಭಾಗಿಯಾಗಿರುವ ಬಗ್ಗೆ ಯಡಿಯೂರಪ್ಪನವರು ಮಾಹಿತಿ ನೀಡುವುದಾದರೆ ವಿಶೇಷ ತನಿಖಾ ತಂಡಕ್ಕೆ ಮಾಹಿತಿ ನೀಡಲಿ ಎಂದು ಐಎಂಎ ವಂಚನೆ ಬಗ್ಗೆ ಮಾತನಾಡಿದ್ದಾರೆ. ಜಿಂದಾಲ್ ಕಂಪೆನಿಗೆ ಭೂಮಿ ಹಸ್ತಾಂತರ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪವನ್ನು ಸಿಎಂ ನಿರಾಕರಿಸಿದ್ದಾರೆ.
ರಾಜ್ಯ ಸರ್ಕಾರದ ವಿಶ್ಲೇಷಣೆ ಪ್ರಕಾರ 30 ಲಕ್ಷ ರೈತರ 16 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ಮನ್ನಾ ಆಗಬೇಕಾಗಿದ್ದು ಅದರಲ್ಲಿ 23 ಲಕ್ಷ ರೈತರ 12 ಸಾವಿರದ 830 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಸಾಲಮನ್ನಾ ವಿಚಾರ ಒಂದು ತೆರೆದ ಪುಸ್ತಕದಂತೆ. ಈ ಬಗ್ಗೆ ವಿವರಣೆ ಬಯಸುವವರು clws.karnataka, gov.inನಲ್ಲಿ ಲಾಗ್ ಇನ್ ಆಗಿ ತಮ್ಮ ಸಂಶಯ ನಿವಾರಣೆ ಮಾಡಿಕೊಳ್ಳಬಹುದು ಎಂದಿದ್ದಾರೆ ಸಿಎಂ ಕುಮಾರಸ್ವಾಮಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com