ಮೋದಿ ಭಜನೆ ಮಾಡಲು ದೆಹಲಿಗೆ ಹೋಗುವವರಿಗೆ ರೈಲು ವ್ಯವಸ್ಥೆ ಮಾಡಿಕೊಡಲು ಸಿದ್ಧ- ಕುಮಾರಸ್ವಾಮಿ

ದೂರದ ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಜನೆಯನ್ನು ಇಲ್ಲಿ ಮಾಡಿದರೆ ಏನು ಪ್ರಯೋಜನವಿಲ್ಲ. ಭಜನೆ ಮಾಡಲು ದೆಹಲಿಗೆ ಹೋಗಲು ಬಯಸುವವರಿಗೆ ರೈಲಿನಲ್ಲಿ ತಾವೇ ಕಳುಹಿಸಿಕೊಡಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ.

Published: 26th June 2019 12:00 PM  |   Last Updated: 26th June 2019 10:59 AM   |  A+A-


CM HDkumaraswamy

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

Posted By : ABN ABN
Source : UNI
ಕರೀಗುಡ್ಡ: ದೂರದ ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಜನೆಯನ್ನು ಇಲ್ಲಿ ಮಾಡಿದರೆ ಏನು ಪ್ರಯೋಜನವಿಲ್ಲ. ಭಜನೆ ಮಾಡಲು ದೆಹಲಿಗೆ ಹೋಗಲು ಬಯಸುವವರಿಗೆ ರೈಲಿನಲ್ಲಿ ತಾವೇ ಕಳುಹಿಸಿಕೊಡಲು ಸಿದ್ಧವಿರುವುದಾಗಿ  ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ.

ಮಾನ್ವಿ ತಾಲೂಕಿನ ಕರೀಗುಡ್ಡದಲ್ಲಿಂದು ವಿವಿಧ  ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಮುಂದೆ ಮೋದಿ ಭಜನೆ ಮಾಡಿದರೆ ಏನಾಗುತ್ತದೆ. ನಿಮಗೆ ಅಷ್ಟೊಂದು ಇಷ್ಟವಿದ್ದರೆ ನೀವೆ ಮೋದಿ ಬಲಿಗೆ ಹೋಗಿ, ಹೋಗಲು ಸಾಧ್ಯವಿಲ್ಲ ಎಂದಾದರೆ ರೈಲು ವ್ಯವಸ್ಥೆ ಮಾಡಿಕೊಡುತ್ತೇನೆ. ಇಲ್ಲವಾದಲ್ಲಿ ರಾಜ್ಯ ಸರ್ಕಾರವೇ ಇದರ ಖರ್ಚು, ವೆಚ್ಚ ಭರಸಲಿದೆ ಎಂದರು.

ಮೋದಿಗೆ ಮತ ಹಾಕಿದವರು ನಮಗೆ ಕೆಲಸ ಮಾಡಬೇಕು ಎಂದು ಹೇಳುವುದು ಎಷ್ಟು ಸರಿ. ಯಾವ ನಿರೀಕ್ಷೆ ಇಟ್ಟುಕೊಂಡು ಮೋದಿ ಅವರಿಗೆ ಮತ ಹಾಕಿದ್ದಾರೋ ಗೊತ್ತಿಲ್ಲ. ಮತ ಹಾಕಿದ ನಂತರ ಅವರೇ ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ತಪ್ಪು ಎನ್ನುವುದಾದರೆ ಇನ್ನು ಮುಂದೆ ಈ ರೀತಿ ಮಾತನಾಡುವುದಿಲ್ಲ ಎಂದರು.

ವೈಟಿಪಿಎಸ್ ಸಂತ್ರಸ್ತರ ಜೊತೆ ತಾಳ್ಮೆಯಿಂದ ಮಾತನಾಡಿದ್ದೇನೆ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವವನು ನಾನಲ್ಲ. ಯಾರೇ ಕಷ್ಟ ಕೇಳಿಕೊಂಡು ಬಂದರೂ ಆಲಿಸುತ್ತೇನೆ. ಆದರೆ, ಕೆಲವರು ರಸ್ತೆ ಮೇಲೆ ಮಲಗಿ ನಾಟಕ ಮಾಡುತ್ತಿದ್ದರು. ಆಗ ನಾನು ರೇಗಾಡಬೇಕಾಯಿತು. ಆದರೆ, ಇದು ದರ್ಪ ಅಲ್ಲ ಎಂದು ತಮ್ಮ ವರ್ತನೆಯನ್ನು ಬಲವಾಗಿ ಸಮರ್ಥಿಸಿಕೊಂಡರು.

ನಮ್ಮದು ಹಾಸನ, ಮಂಡ್ಯಕ್ಕೆ ಸೀಮಿತವಾದ ಸರ್ಕಾರ ಎಂದು ಟೀಕಿಸುವ ಮಹಾನುಭಾವರು ಕಣ್ತೆರೆದು ನೋಡಬೇಕು. ನಾವೀಗ ರಾಯಚೂರು ಜಿಲ್ಲೆಗೆ 4 ಸಾವಿರ ಕೋಟಿ ರೂಪಾಯಿ ನೀಡಿದ್ದೇವೆ. ಇದು ಮೈತ್ರಿ ಸರ್ಕಾರವಲ್ಲ, ನಾಡಿನ ಜನರ ಸರ್ಕಾರ. ನಾನು ಬಿಜೆಪಿ ನಾಯಕರಂತೆ ನಾಟಕ ಮಾಡುವವನಲ್ಲ ಎಂದು ಕುಮಾರಸ್ವಾಮಿ ಹೇಳಿದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp