ಗ್ರಾಮ ವಾಸ್ತವ್ಯ ಮಾರ್ಗದಲ್ಲಿ ಪ್ರತಿಭಟನೆ: ಬಿಜೆಪಿ ಷಡ್ಯಂತ್ರ- ಎಚ್ ಡಿ ದೇವೇಗೌಡ

ಕುಮಾರಸ್ವಾಮಿ ನಿನೂತನ ರೀತಿಯಲ್ಲಿ ಗ್ರಾಮವಾಸ್ತವ್ಯ ಮಾಡಲು ಹೊರಟಿರುವುದನ್ನು ಸಹಿಸದವರು ಈ ರೀತಿ ಪ್ರತಿಭಟನೆ ಮಾಡಿಸುವ ಮೂಲಕ ಅಡ್ಡಿಪಡಿಸುತ್ತಿದ್ದಾರೆ...

Published: 26th June 2019 12:00 PM  |   Last Updated: 26th June 2019 04:51 AM   |  A+A-


Protest on the way to Grama Vastavya is BJP's conspiracy, says HD Devegowda

ಗ್ರಾಮ ವಾಸ್ತವ್ಯ ಮಾರ್ಗದಲ್ಲಿ ಪ್ರತಿಭಟನೆ: ಬಿಜೆಪಿ ಷಡ್ಯಂತ್ರ- ಎಚ್ ಡಿ ದೇವೇಗೌಡ

Posted By : SBV SBV
Source : UNI
ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ವೈಖರಿ ನೋಡಿ ಸಹಿಸಿಕೊಳ್ಳದ ಯಾವುದೋ ಒಂದು ಶಕ್ತಿ ಉತ್ತಮ ಕೆಲಸಕ್ಕೆ ಅಡಚಣೆ ಮಾಡುತ್ತಿದೆ ಗ್ರಾಮವಾಸ್ತವ್ಯ ಪ್ರತಿಭಟನೆಯಲ್ಲಿ ಬಿಜೆಪಿಯವರ ಷಡ್ಯಂತ್ರವಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್‌ ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮವಾಸ್ತವ್ಯವನ್ನು ಬಿಜೆಪಿಯ ನಾಯಕರು ನೇರವಾಗಿ ವಿರೋಧಿಸುತ್ತಿದ್ದಾರೆ. ಈ ಕುರಿತ ಪ್ರತಿಭಟನೆಯಲ್ಲಿ ಬಿಜೆಪಿ ಷಡ್ಯಂತ್ರವಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಆದರೆ ದಾರಿ ಮಧ್ಯದಲ್ಲಿ ಈರೀತಿ ಪ್ರತಿಭಟನೆ ಮಾಡಿದರೆ ಅವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಕರೆಗುಡ್ಡಕ್ಕೆ ತಲುಪುವ ಮೊದಲೇ ಮಧ್ಯದಲ್ಲಿ ತಡೆದು ಸ್ಥಳದಲ್ಲಿಯೇ ಕೆಲಸ ಮಾಡಿಕೊಡಿ ಎಂದು ಪಟ್ಟುಹಿಡಿಯುವುದು ಎಷ್ಟರಮಟ್ಟಿಗೆ ಸರಿ. ಕರೆಗುಡ್ಡದಲ್ಲಿ ಮುಖ್ಯಮಂತ್ರಿಯವರ ಗ್ರಾಮವಾಸ್ತವ್ಯಕ್ಕೆ ಪೂರ್ಣಕುಂಭ ಸ್ವಾಗತಕ್ಕೆ ಜನ ಕಾಯುತ್ತಿರುವ ಸಂದರ್ಭದಲ್ಲಿಯೇ ಏಕಾಏಕಿ ಸಾವಿರಾರು ಜನ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಏಕೆ ಹೀಗೆ ಮಾಡುತ್ತಿದ್ದೀರಾ? ಲಾಠಿ ಚಾರ್ಜ್ ಮಾಡಿಸೇಕೆ ಎಂದು ಒಲ್ಲದ ಮನಸ್ಸಿನಿಂದ ಕೇಳಿದ್ದಾರೆ. ಪ್ರತಿಭಟನೆ ತಡೆಯುವಲ್ಲಿ ಪೊಲೀಸರಿಗೂ ಒಂದು ಹಂತದವರೆಗೆ ಮಾತ್ರ ತಾಳ್ಮೆ ಇರುತ್ತದೆ. ಪ್ರತಿಭಟನೆಯಿಂದಾಗಿ ಪಾಪ ಕುಮಾರಸ್ವಾಮಿ ಒದ್ದಾಡುತ್ತಿದ್ದಾರೆ ಎಂದು ಗೌಡರು ಬೇಸರ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ನಿನೂತನ ರೀತಿಯಲ್ಲಿ ಗ್ರಾಮವಾಸ್ತವ್ಯ ಮಾಡಲು ಹೊರಟಿರುವುದನ್ನು ಸಹಿಸದವರು ಈ ರೀತಿ ಪ್ರತಿಭಟನೆ ಮಾಡಿಸುವ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ‌ ರೈತರ ಸಾಲ ಮನ್ನಾ ಯೋಜನೆ ರೈತಪರ ಯೋಜನೆಯಾಗಿದ್ದು, ಇದನ್ನು ವಿರೋಧಿಗಳು ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸಿದರು. 2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿರೋಧಿಗಳು ಮಾಡಿದ ಅಪಪ್ರಚಾರದಿಂದಾಗಿ ಪಕ್ಷಕ್ಕೆ 37 ಸ್ಥಾನಗಳು ಬರುವಂತಾಯಿತು. ಆದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅನುಷ್ಠಾನಕ್ಕೆ ಬಂದಂತಹ ಎಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಮುಂದುವರೆಸಿ ಸಾಲಮನ್ನಾ ಯೋಜನೆ ನಿರ್ಧಾರ ಕೈಗೊಂಡರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಜುಲೈ 30ರೊಳಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಹೇಳಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೆಲವರು ಹೇಳಿಕೆಗಳನ್ನು ನೀಡಿದ್ದಾರೆ. ರೈತರ ಸಾಲಮನ್ನಾ ಮಾಡಲು ಮುಂದಾಗದ ಬಿಜೆಪಿ ನಾಯಕರು, ವರ್ಷಕ್ಕೆ ರೈತರಿಗೆ 6 ಸಾವಿರ ಕೊಟ್ಟು ದೇಶಾದ್ಯಂತ ಪ್ರಚಾರ ಪಡೆಯುತ್ತಾರೆ. ಸದಾಕಾಲ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ವಿನಾಕಾರಣ ಆರೋಪ ಮಾಡಲು ನಮಗೂ ಬರುತ್ತದೆ. ಎಂದು ಬಿಜೆಪಿ ವಿರುದ್ಧ ಅವರು ಕಿಡಿಕಾರಿದರು.

ಕುಮಾರಸ್ವಾಮಿ ಸರ್ಕಾರದ ಆಡಳಿತಯಂತ್ರವನ್ನು ಸಮರ್ಪಕವಾಗಿ ನಿಭಾಯಿಸುವ ಜೊತೆಗೆ ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಯನ್ನೂ ಆಲಿಸುತ್ತಿದ್ದಾರೆ. ಹೀಗಿದ್ದರೂ ಅವರಿಗೆ ತೊಂದರೆ ಕೊಡುವುದು ಸರಿಯೇ ಎಂದು ದೇವೇಗೌಡ ಕಿಡಿಕಾರಿದರು.

ಪಕ್ಷ ಸಂಘಟನೆ ಚುರುಕುಗೊಳಿಸಲು ನೂತನ ರಾಜ್ಯಾಧ್ಯಕ್ಷರನ್ನು ಇನ್ನೆರಡು ಮೂರು ದಿನಗಳಲ್ಲಿ ನೇಮಿಸಲಾಗುವುದು. ಯುವ ಘಟಕ ಅಧ್ಯಕ್ಷ ಎಸ್.ಮಧುಬಂಗಾರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದು ಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿಯಿದೆ ಆದರೂ ಪಕ್ಷದ ಚುಕ್ಕಾಣಿಯನ್ನು ಪರಿಶಿಷ್ಟರಿಗೆ ನೀಡುವ ಬಗ್ಗೆ ತೀರ್ಮಾನಿಸಿರುವುದಾಗಿ ದೇವೇಗೌಡ ಹೇಳಿದರು. 

ಪಕ್ಷದಲ್ಲಿ ಆರು ಶಾಸಕರು ಪರಿಶಿಷ್ಟ ವರ್ಗಕ್ಕೆ ಸೇರಿದವರಿದ್ದು, ಈ ಪೈಕಿ ಒಬ್ಬರನ್ನು ಈ ಹುದ್ದೆಗೆ ನೇಮಿಸಲಾಗುವುದು. ಆ ಮೂಲಕ ಪರಿಶಿಷ್ಟರಿಗೆ ದೇವೇಗೌಡರು ಏನು ಮಾಡಿಲ್ಲ ಎಂಬ ಆರೋಪವನ್ನು ತೊಡೆದುಹಾಕುವ ಪ್ರಯತ್ನ ಮಾಡಲಾಗುವುದು. ಈ ಸಂಬಂಧ ಆದಷ್ಟು ಬೇಗ ಸಭೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಸಂಸತ್ ಅಧಿವೇಶನದಲ್ಲಿ ಮಂಡ್ಯ ಕ್ಷೇತ್ರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗ್ಗೆ ಸಂಸದೆ ಸುಮಲತಾ ಧ್ವನಿಯೆತ್ತಲಿಲ್ಲವಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ದೇವೇಗೌಡ ಮುಂದಾಗಲಿಲ್ಲ. ಅವರ ಬಗ್ಗೆ ತಾವೇಕೆ ಪ್ರತಿಕ್ರಿಯಿಸಬೇಕು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣ, ನಿಜವಾಗಿಯೂ ರೈತ ಕೆಲಸ ಮಾಡುತ್ತಿದ್ದಾನೆ. ರೈತನ ಹೊಟ್ಟೆಯಲ್ಲಿ ಹುಟ್ಟಿ ಬೆಳೆದಿರುವ ಅವನು ಊರಲ್ಲಿ ಅತ್ಯುತ್ತಮ‌ ಕೃಷಿ ಮಾಡಿ ಉತ್ತಮ ಫಸಲು ಬೆಳೆಯುತ್ತಾನೆ. ಕುಮಾರಸ್ವಾಮಿ ಖರೀದಿಸಿರುವ ಭೂಮಿಯಲ್ಲಿ ನಿಖಿಲ್ ಕೂಡ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಸಂಸತ್ ನಲ್ಲಿ ಭ್ರಷ್ಟ ಸರ್ಕಾರ ಎಂಬ ಬಿಜೆಪಿಯ ತೇಜಸ್ವಿ ಸೂರ್ಯನ‌ ಮಾತಿಗೆ ಪ್ರಜ್ವಲ್ ಸಮರ್ಥವಾಗಿ ಉತ್ತರ ನೀಡಿದ್ದಾನೆ‌. ತಂದೆ ಮತ್ತು ಚಿಕ್ಕಪ್ಪನ ಹೋರಾಟ ಅವನಿಗೆ ಗೊತ್ತಿದೆ ಎಂದು ದೇವೇಗೌಡ ಮೊಮ್ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp